

ಮೈಸೂರು: ಮೈಸೂರು ಅನಂತಸ್ವಾಮಿ ಮೆಮೋರಿಯಲ್ ಟ್ರಸ್ಟ್ ಸಹಯೋಗದಲ್ಲಿ ನಾದಾಮೃತ ಸಂಗೀತ ವಿದ್ಯಾಲಯ (ನಿತಿನ್ಸ್ ನಾದಾಮೃತ)ದ ಒಂಬತ್ತನೇ ವಾರ್ಷಿಕೋತ್ಸವ ಹಾಗೂ ರಾಜು ಅನಂತಸ್ವಾಮಿ ಅವರ ನೆನಪಿನ ನಾಲ್ಕನೇ ವರ್ಷದ ರಾಜು ಗಾನಲಹರಿ ಆಯೋಜಿಸಲಾಗಿತ್ತು.
ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕ ಎಸ್.ಎಸ್.ಉಮೇಶ್ ಉದ್ಘಾಟಿಸಿ ಮಾತನಾಡಿ, ಸುಗಮ ಸಂಗೀತ ಹಾಗೂ ಮೈಸೂರು ಆಕಾಶವಾಣಿಗೆ ಇರುವ ಸಂಬಂಧ, ಸಾಹಿತಿಗಳು, ಗಾಯಕರನ್ನು ಸ್ಮರಿಸಿದರು.
ಆಕಾಶವಾಣಿಯು ಹೊಸ ರೀತಿಯ ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಂಗೀತದ ಎಲ್ಲ ಪ್ರಾಕಾರಗಳನ್ನು ಕೇಳುಗರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದು, ಇಂತಹ ಕಾರ್ಯಕ್ರಮಗಳು ಕೂಡ ಜನರನ್ನು ತಲುಪಲು ಬಹಳ ಒಳ್ಳೆಯ ಅವಕಾಶಗಳು ಎಂದರು.
ಸಾನ್ನಿಧ್ಯ ವಹಿಸಿದ್ದ ಅರ್ಜುನ ಅವಧೂತ ಮಾತನಾಡಿ, ನಿತ್ಯ ಸಂಗೀತ ಕೇಳುವುದರಿಂದ ಸಂಸ್ಕಾರ ಬೆಳೆಸುತ್ತದೆ. ನಮ್ಮ ನಡುವೆ ಇದ್ದ ಸುಗಮ ಸಂಗೀತ ಕ್ಷೇತ್ರದ ದಿಗ್ಗಜ ಮೈಸೂರು ಅನಂತಸ್ವಾಮಿ ಅವರು ಈ ಕ್ಷೇತ್ರವನ್ನು ಎತ್ತರಕ್ಕೆ ತೆಗೆದುಕೊಂಡು ಹೋದರೆ, ಅವರ ಪುತ್ರ ರಾಜು ಅನಂತಸ್ವಾಮಿ ಅವರು, ಗಾಯನ ಅಷ್ಟೇ ಅಲ್ಲದೆ ಸಂಗೀತ, ರಾಗ ಸಂಯೋಜನೆ ಸೇರಿದಂತೆ ಎಲ್ಲ ಪ್ರಾಕಾರದಲ್ಲೂ ಪರಿಣತಿ ಗಳಿಸಿದ್ದ ಪ್ರತಿಭಾವಂತರಾಗಿದ್ದರು ಎಂದು ಬಣ್ಣಿಸಿದರು.
ರಾಜು ಅನಂತಸ್ವಾಮಿ ಅವರ ಚಿತ್ರ ಅನಾವರಣಗೊಳಿಸಿದ ಶಾಂತಾ ಅನಂತಸ್ವಾಮಿ ಮಾತನಾಡಿ, ಚಿತ್ರದಲ್ಲಿ ಕಾಣುವಂತೆ ರಾಜು ಅವರ ಮುಗ್ಧತೆ ಕೊನೆಯವರೆವಿಗೂ ಹಾಗೆಯೇ ಉಳಿಸಿಕೊಂಡಿದ್ದರು. ನಿತಿನ್ ಸೇರಿದಂತೆ ಅನೇಕ ಶಿಷ್ಯರಿಗೆ ತನ್ನ ಪ್ರತಿಭೆಯನ್ನು ಧಾರೆ ಎರೆದಿದ್ದ. ಅವನಿಂದ ಕಲಿತ ಎಷ್ಟೋ ಜನ ಎತ್ತರಕ್ಕೆ ಏರಿದ್ದಾರೆ ಎಂದು ಹಾರೈಸಿದರು.
ವಿದ್ಯಾಲಯದ ಸಂಸ್ಥಾಪಕ ನಿತಿನ್ ರಾಜರಾಮ್ ಶಾಸ್ತ್ರಿ ಮಾತನಾಡಿ, ಸಂಸ್ಥೆ ಮುಂದಿನ ವರ್ಷ 10ನೇ ವರ್ಷ ಪೂರೈಸಲಿದ್ದು, ಅದರ ಅಂಗವಾಗಿ ಇಡೀ ವರ್ಷ ಹಲವು ವಿಶಿಷ್ಟ ಕಾರ್ಯಕ್ರಮಗಳು ಮೂಡಿ ಬರಲಿದೆ. ನನ್ನ ಗುರುಗಳ ಹೆಸರಿನಲ್ಲಿ ಕಲಾಸೇವೆ ಮುಂದುವರಿಲಿದೆ ಎಂದು ಹೇಳಿದರು.
ಸಂಯೋಜಕರಾದ ಎನ್.ಎಸ್.ಪ್ರಸಾದ್ , ಮೈಸೂರು ಅನಂತಸ್ವಾಮಿ ಮೆಮೊರಿಯಲ್ ಟ್ರಸ್ಟ್‌ನ ಡಾ.ಮಾಯಾ ಸೀತಾರಾಮ್ ಇದ್ದರು. ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಟಿ.ಎಸ್.ರಾಜಾರಾಮ್, ಗೀತಾ ರಾಜಾರಾಮ್, ವಿಕ್ರಮ್ ವಾಸುದೇವ್, ಶಿವಕುಮಾರ್, ವಿದ್ಯಾಶ್ರೀ, ನಂದಿನಿ, ಶಿಲ್ಪಾ ಪ್ರಸಾದ್, ಅರವಿಂದ್ ಪ್ರಸಾದ್ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಯುವ ಗಾಯಕ ಮಹೇಶ್ ಪ್ರಿಯದರ್ಶನ್ ಅವರಿಗೆ ಗಾನರತ್ನಾ ಹಾಗೂ ರಿದಂ ಪ್ಯಾಡ್, ತಬಲಾ ವಾದಕರಾದ ವಿನಯ್ ರಂಗಧೋಳ್ ಅವರಿಗೆ ರಾಜು ನಾದರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉದ್ಘಾಟನೆ ಬಳಿಕ ವಿದ್ಯಾಲಯದ ಮಕ್ಕಳಿಂದ ಗಾಯನ ಕಾರ್ಯಕ್ರಮ ನಡೆಯಿತು.