

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕೇಶ್ವಾಪುರ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಶ್ರೀ ಶಿವಾಂಚಿ ಓಸ್ವಾಲ್ ಜೈನ್ ಸಂಘ ಹಾಗೂ ಶ್ರೀ ಶಿವಾಂಚಿ ಜೈನ್ ಯುವಕ ಮಂಡಲ ಆಯೋಜಿಸಿದ್ದ 5ನೇ ಆವೃತ್ತಿಯ ಜೈನ್ ಕ್ರಿಕೆಟ್ ಲೀಗ್ (ಜೆಸಿಎಲ್)ನಲ್ಲಿ ರಮನಿಯಾ ವಾರಿಯರ್ಸ್ ಚಾಂಪಿಯನ್ ಆಗಿದೆ.
ಫೈನಲ್ಸ್ನಲ್ಲಿ ರಮನಿಯಾ ವಾರಿಯರ್ಸ್, ಸಿಸಿ 1 ತಂಡದ ವಿರುದ್ಧ 9 ವಿಕೆಟ್ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ವಾರಿಯರ್ಸ್, ಸಿಸಿ1 ತಂಡವನ್ನು 33ರನ್ ಮೊತ್ತಕ್ಕೆ ಆಲೌಟ್ ಮಾಡಿತು. ಇದನ್ನು ಬೆನ್ನಟ್ಟಿದ ರಮನಿಯಾ ವಾರಿಯರ್ಸ್ 2.3 ಓವರ್ಗಳಲ್ಲಿ ಒಂದು ವಿಕೆಟ್ಗೆ 34ರನ್ ಗಳಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದವು.
ವಾರಿಯರ್ಸ್ ತಂಡದ ನಾಯಕ ಸುರೇಶ್ ಜೈನ್ (ಲಕ್ಕಿ) ಸತತ 4ನೇ ವರ್ಷವೂ ಅತ್ಯುತ್ತಮ ಬ್ಯಾಟರ್ ಪ್ರಶಸ್ತಿ ಪಡೆದಿದ್ದಾರೆ. ಫೈನಲ್ ಪಂದ್ಯದಲ್ಲಿ ಎದುರಾಳಿ ತಂಡದ ನಾಲ್ವರು ಆಟಗಾರರನ್ನು ರನೌಟ್ ಮಾಡುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇದರಿಂದ ಸುರೇಶ ಜೈನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸಿಸಿ1 ತಂಡದ ವಿನಯ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಜಿತೇಂದ್ರ ಜೈನ್ ಅತ್ಯುತ್ತಮ ಬೌಲರ್ ಪ್ರಶಸ್ತಿಗೆ ಪಾತ್ರರಾದರು.
ಬೆಳಗ್ಗೆ ನವಕಾರ ಮಂತ್ರದೊಂದಿಗೆ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಅತಿಥಿಗಳಾಗಿ ಸಂಕಲ್ಪ ಶೆಟ್ಟರ್, ಆದರ್ಶ ಉಪ್ಪಿನ್, ಎಸಿಪಿ ವಿನೋದ ಮುಕ್ತೇದಾರ, ಅಸೋಸಿಯೇಶನ್ ಅಧ್ಯಕ್ಷ ಮಹಾವೀರ ಪಾಲ್ರೇಚಾ, ಸಹ ಸಂಚಾಲಕ ಪ್ರವೀಣ ಬಗ್ರೇಚಾ, ಯುವ ಸಂಘಟನೆಯ ಅಧ್ಯಕ್ಷ ಧಮೇಂದ್ರ ಬಗ್ರೇಚಾ, ಸಂಚಾಲಕ ವಿಪಿನ್ ರಾಂಕಾ, ರಿಷಭ ವಿನಾಯಕಿಯಾ, ಕಿಶೋರ್ ಬಗ್ರೇಚಾ, ಸಂತೋಷ ಬನ್ಷಾಲಿ, ವೈಭವ ಜೈನ್, ರಾಜು ವಡೇರಾ ಮೊದಲಾದವರು ಉಪಸ್ಥಿತರಿದ್ದರು.