ಮಗುವನ್ನು ತಾಯಿ ಮಡಿಲು ಸೇರಿಸಿದ ಪೇದೆ

RBK 30 - 1
ಬನಹಟ್ಟಿಯಲ್ಲಿ ಕಳೆದ ಹೋಗಿದ್ದ ಮಗು ತಾಯಿ ಮಡಿಲು ಸೇರಿದ ಕ್ಷಣ.
Published on

ರಬಕವಿ/ಬನಹಟ್ಟಿ: ತಪ್ಪಿಸಿಕೊಂಡಿದ್ದ ಮಗು ಮರಳಿ ತಾಯಿ ಮಡಿಲು ಸೇರಿದ ಘಟನೆ ಬನಹಟ್ಟಿಯಲ್ಲಿ ಶುಕ್ರವಾರ ನಡೆದಿದೆ. ಮಗು ತಾಯಿಯನ್ನು ನೋಡಿದ ಕೂಡಲೇ ಅಳುತ್ತ ಓಡಿ ಬಂದು ತಬ್ಬಿಕೊಂಡು ಕಣ್ಣೀರು ಸುರಿಸಿದ ಕ್ಷಣ ಮನಕಲುಕುವಂತಿತ್ತು

ಶುಕ್ರವಾರ ಬೆಳಗ್ಗೆ ೧೦ ಗಂಟೆಗೆ ಬನಹಟ್ಟಿ ಗಾಂಧಿ ವೃತ್ತದ ಬಳಿಯ ಅಂಗಡಿಗೆ ನಾಲ್ಕು ವರ್ಷದ ಸೋನಂ ಎಂಬ ಮಗನೊಂದಿಗೆ ಹಾಲು ಖರೀದಿಸಲು ತಾಯಿ ಇಂದ್ರಾವತಿ ಬಂದಿದ್ದರು. ಆ ಜನನಿಬಿಡ ಪ್ರದೇಶದಲ್ಲಿ ಮಗು ಕೈ ತಪ್ಪಿಸಿಕೊಂಡಿದೆ. ನಂತರ ಅಳುತ್ತ ಮಾರುಕಟ್ಟೆಯಲ್ಲಿ ತಿರುಗಾಡುವುದನ್ನು ನೋಡಿದ ಬನಹಟ್ಟಿ ಠಾಣೆ ಪೊಲೀಸ್ ಪೇದೆ ಮುತ್ತಣ್ಣ ಅಜ್ಜನವರ, ಆ ಮಗುವನ್ನು ಎತ್ತಿಕೊಂಡು ವಿಚಾರಿಸಿದ್ದಾರೆ. ಆದರೆ, ಮಗು ತನ್ನ ಹೆಸರನ್ನಷ್ಟೇ ಹೇಳಿದೆ

ಮಗುವನ್ನು ಕುಟುಂಬದವರಿಗೆ ಒಪ್ಪಿಸಲು ಪೇದೆ ನಗರವನ್ನೆಲ್ಲ ಪ್ರದಕ್ಷಿಣೆ ಹಾಕಿದ್ದಾರೆ. ಕೊನೆಗೆ ಶನಿವಾರ ಪೇಟೆಗೆ ಆಗಮಿಸುತ್ತಿದ್ದಂತೆ ಅಲ್ಲಿಯೇ ಬಾಡಿಗೆ ಮನೆಯಲ್ಲಿ ವಾಸವಿದ್ದ ಇಂದ್ರಾವತಿ ಮತ್ತು ವಿಜಯನಾಥ ಘೋರಕಪುರ ಅವರ ಮಗು ಎಂದು ಗೊತ್ತಾಗಿದೆ. ಮಗುವನ್ನು ಕೆಳಗೆ ಇಳಿಸುತ್ತಿದ್ದಂತೆ ಮನೆಯತ್ತ ಓಡಿ ಹೋಗಿ ಚಿಂತಾಕ್ರಾಂತದಲ್ಲಿ ಕುಳಿತ ತಾಯಿ ಇಂದ್ರಾವತಿಯನ್ನು ಅಪ್ಪಿಕೊಂಡು ಸಂತಸದ ಕಣ್ಣೀರು ಹಾಕಿತು. ಅಲ್ಲಿದ್ದ ಜನರಿಗೆ ಇದೊಂದು ಸಿನಿಮಾ ದೃಶ್ಯದಂತೆ ಭಾಸವಾದರೆ, ತಾಯಿ-ಮಗನನ್ನು ಒಂದು ಮಾಡಿದ ಸಂತೃಪ್ತಭಾವ ಪೇದೆ ಮುಖದಲ್ಲಿ ಕಾಣಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net