ರಫ್ತು ಕೇಂದ್ರದ ಕಟ್ಟಡ ಪೂರ್ಣಕ್ಕೆ ಮೈಸೂರು ಉದ್ಯಮಿಗಳ ಮನವಿ

17
Published on

ಮೈಸೂರು: ನಗರದ ರಫ್ತು ಕೇಂದ್ರದ ಕಟ್ಟಡ ನಿರ್ಮಾಣವನ್ನು ಮತ್ತೆ ಆರಂಭಿಸಿ ಪೂರ್ಣಗೊಳಿಸಬೇಕು ಎಂದು ಮೈಸೂರು ಕೈಗಾರಿಕಾ ಸಂಘದಿಂದ ಬೆಂಗಳೂರಿನಲ್ಲಿ ಬುಧವಾರ ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಡೆಪಾಸಿಟ್ ಕಾಂಟ್ರಿಬ್ಯೂಷನ್ ಯೋಜನೆಯಡಿ ಮೈಸೂರು ರಫ್ತು ಕೇಂದ್ರದ ಕಟ್ಟಡ ನಿರ್ಮಾಣ ಹೊಣೆಯನ್ನು ಮೈಸೂರು ಕೈಗಾರಿಕೆಗಳ ಸಂಘ, ಕೆಐಎಡಿಬಿಗೆ ನೀಡಲಾಗಿತ್ತು. 2019ರಲ್ಲಿ ಆರಂಭಗೊಂಡ ಕಾಮಗಾರಿ 2021ರಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ಇನ್ನೂ ಕಟ್ಟಡ ಪೂರ್ಣಗೊಂಡಿಲ್ಲ. ರಾಜ್ಯ ಸರ್ಕಾರದ ಒಂದು ಕೋಟಿ ರೂ., ಕೇಂದ್ರ ಸರ್ಕಾರದ ಮೂರು ಕೋಟಿ ರೂ. ಹಾಗೂ ಮೈಸೂರು ಕೈಗಾರಿಕೆಗಳ ಸಂಘದಿಂದ 50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ನಡೆಸಲು ಯೋಜನೆ ರೂಪಿಸಲಾಗಿದೆ. ಆದರೆ, ಗುತ್ತಿಗೆದಾರರು ಹಣ ಬಿಡುಗಡೆಗೊಂಡಿಲ್ಲವೆಂದು ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎಂಬುದನ್ನು ಡಾ.ಸೆಲ್ವಕುಮಾರ್ ಅವರ ಗಮನಕ್ಕೆ ತಂದರು.
ವಿಷಯವನ್ನು ಮುಖ್ಯಮಂತ್ರಿ, ಕೈಗಾರಿಕಾ ಸಚಿವರ ಗಮನಕ್ಕೆ ತಂದು ಶೀಘ್ರ ಕಾಮಗಾರಿ ಆರಂಭಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಸೆಲ್ವಕುಮಾರ್ ಭರವಸೆ ನೀಡಿದರು.
ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ, ಮಾಜಿ ಶಾಸಕ ವಾಸು, ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್, ಜಂಟಿ ಕಾರ್ಯದರ್ಶಿ ಸತೀಶ್, ಖಜಾಂಚಿ ಶ್ರೀಶೈಲ ರಾಮಣ್ಣನವರ್, ಕೌಶಲ ಸಮಿತಿ ಸದಸ್ಯರಾದ ಅನಂತ ಶಯನ, ರಿತೇಶ್‌ಗೌಡ, ಗಿರೀಶ್ ಹಲಗೂರು, ಸುಬ್ರಮಣಿಯನ್ ಇತರರು ನಿಯೋಗದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net