

ಹಾಸನ: ರನ್ನ, ಪೊನ್ನ, ಜನ್ನ ಎಂಬ ಮಹಾನ್ ಕವಿಗಳು ನಾಡಿಗೆ ಕೊಟ್ಟಿರುವ ಕೊಡುಗೆ ನಾವೆಲ್ಲರೂ ಅಪ್ಪಿಕೊಳ್ಳುವಂತದ್ದಾಗಿದೆ. ಆದ ಕಾರಣ ಕನ್ನಡ ನೆಲ, ಜಲ ಮತ್ತು ಅಸ್ಮಿತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲ ಪರಿಷತ್ತುಗಳು, ಘಟಕಗಳು, ಪ್ರತಿಷ್ಠಾನಗಳು ಶ್ರಮಿಸುತ್ತಿವೆ ಎಂದು ಪ್ರಾಂಶುಪಾಲ ಡಾ. ಎಂ.ಬಿ. ಇರ್ಷಾದ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಕನ್ನಡ ವಿಭಾಗದ ಕುವೆಂಪು ಕನ್ನಡ ಸಾಹಿತ್ಯ ವೇದಿಕೆ , ಕರ್ನಾಟಕ ಗಮಕ ಕಲಾ ಪರಿಷತ್ತು, ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನ, ಕನ್ನಡ ಸಹೃದಯ ಪ್ರತಿಷ್ಠಾನ (ಕುಮಾರವ್ಯಾಸ ಮಂಟಪ) ಇವರ ಸಹಯೋಗದಲ್ಲಿ ಕಾಲೇಜಿನ ಮಿನಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಭಾಷಣ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಜಾಗತಿಕ ಸಮಾಜದಲ್ಲಿ ಕನ್ನಡತನ ನಶಿಸುತ್ತಿದೆ. ಕನ್ನಡ ಬೆಳವಣಿಗೆಯನ್ನು ಉಳಿಸಿಕೊಂಡರೆ ಅದೇ ನಾಡು ಕನ್ನಡ ಸಾಹಿತ್ಯಕ್ಕೆ ಕೊಡುವ ಗೌರವವಾಗಿದೆ ಎಂದು ಹೇಳಿದರು.
ತೀರ್ಪುಗಾರರಾಗಿ ಆಗಮಿಸಿದ್ದ ನಿವೃತ್ತ ಪ್ರಾಂಶುಪಾಲರಾದ ಅನುಸೂಯಾ ಮಾತನಾಡಿ, ಕನ್ನಡ ಕಾವ್ಯ ಹಾಗೂ ಸಾಹಿತ್ಯದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಆಸಕ್ತಿ ಕುಗ್ಗುತ್ತಿದೆ. ಸಂಸ್ಕಾರ ಇಲ್ಲದ ವಿದ್ಯೆ ಕಸಕ್ಕೆ ಸಮಾನ ಎಂಬಂತೆ ನಮ್ಮ ಆಚಾರ ನಮ್ಮ ಸಂಸ್ಕೃತಿಯನ್ನು ಹೇಳುತ್ತಿದೆ. ಕಲೆ ಮತ್ತು ಸಾಹಿತ್ಯದ ಬಗ್ಗೆ ಅಭಿರುಚಿ ಇಲ್ಲದ ಮನುಷ್ಯ ಎಲ್ಲಿಯೂ ಸಲ್ಲುವುದಿಲ್ಲ. ಸಾಹಿತ್ಯಕ್ಕೆ ಉಂಟಾಗುತ್ತಿರುವ ಸೋಲಿನ ಉದ್ದೇಶದ ಬಗ್ಗೆ ಹಾಗೂ ಕವಿಗಳ ಬಗ್ಗೆ ಮತ್ತು ಸಾಹಿತ್ಯದ ಬಗ್ಗೆ ಪ್ರತಿಯೊಬ್ಬ ಕನ್ನಡಿಗರಿಗೂ ಪರಿಚಯವಿರಬೇಕು. ಆ ಉದ್ದೇಶದಿಂದಲೇ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕುಮಾರವ್ಯಾಸ ನಿತ್ಯ ನವಿರಾದ ಕವಿ ಎಂಬುದು ಈ ಸಂದರ್ಭದಲ್ಲಿ ಸಾರ್ಥಕತೆ ಮೆರೆದಿದೆ ಎಂದು ಹೇಳಿದರು.
ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಉಡುಪ, ಕುಮಾರವ್ಯಾಸರ ಕುರಿತಾಗಿ ಗೀತಗಾಯನದ ಮೂಲಕ ತಮ್ಮ ಮಾತುಗಳಿಗೆ ಚಾಲನೆ ನೀಡಿ ಗೀತಗಾಯನದ ಮೂಲಕವೇ ಮಾಹಿತಿ ಹಂಚಿದರು.
ಕಾರ್ಯಕ್ರಮದಲ್ಲಿ ವಿದ್ವಾನ್ ಪರಮೇಶ್ವರ ವಿ.ಭಟ್, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪ್ರಮೀಳಾ, ಶೈಕ್ಷಣಿಕ ಡೀನ್ ಡಿ.ಎಸ್. ರಾಜು, ಪತ್ರಾಂಕಿತ ವ್ಯವಸ್ಥಾಪಕರಾದ ಕೆ.ಟಿ. ಸತ್ಯಮೂರ್ತಿ, ರಾಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಪಿ.ಆರ್.ಶಾಂತಾ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅನಿತಾ, ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಡಿ. ದೇವರಾಜು ಹಾಜರಿದ್ದರು.