ರನ್ನ ಆತ್ಮವಿಶ್ವಾಸ ಮೂಡಿಸುವ ಕವಿ

3428191f-b5df-4efe-8982-4013091bd3ef
Published on

ಕವಿಚಕ್ರವರ್ತಿ ರನ್ನ ವೇದಿಕೆ ರನ್ನ ಬೆಳಗಲಿ ಬಾಗಲಕೋಟೆ: ಕನ್ನಡ ನಾಡು, ಭಾಷೆಗೆ ಬಹುದೊಡ್ಡ ಕೊಡುಗೆ ನೀಡಿ ಕನ್ನಡವನ್ನು ಶ್ರೀಮಂತಗೊಳಿಸಿ, ಆತ್ಮವಿಶ್ವಾಸ ಮೂಡಿಸುವ ಕವಿ ಎಂದರೆ ಅದು ಕವಿಚಕ್ರವರ್ತಿ ರನ್ನ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮುಧೋಳದ ರನ್ನ ಪ್ರತಿಷ್ಠಾನದ ಆಶ್ರಯದಲ್ಲಿ ರನ್ನ ಬೆಳಗಲಿ ಪಟ್ಟಣದ ಬಂದಲಕ್ಷೀ ದೇವಸ್ಥಾನದ ಆವರಣದಲ್ಲಿ ಕವಿಚಕ್ರವರ್ತಿ ರನ್ನ ವೇದಿಕೆಯಲ್ಲಿ ರನ್ನ ವೈಭವ ೨೦೨೫ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ರನ್ನ ಐದು ಮಹಾಕಾವ್ಯಗಳನ್ನು ಬರೆದಿದ್ದು, ಅದರಲ್ಲಿ ಚಕ್ರವೇಶ್ವರ ಚರಿತೆ ಹಾಗೂ ಪರಶುರಾಮ ಚರಿತೆ ಇನ್ನು ನಮಗೆ ಲಭ್ಯವಾಗಿಲ್ಲ. ಈ ಬಗ್ಗೆ ಹೆಚ್ಚೆಚ್ಚು ಸಂಶೋಧನೆ ಹಾಗೂ ಅವುಗಳನ್ನು ಪತ್ತೆಹಚ್ಚುವ ಕೆಲಸ ಆಗಬೇಕು ಎಂದರು.

ರನ್ನ ತಾನೇ ಹೇಳಿಕೊಳ್ಳುವಂತೆ ರನ್ನ ವಾಗ್ದೇವಿ ಶಬ್ದ ಭಂಡಾರದಿಂದ ಉದಯಿಸಿದ ಕವಿ. ನನ್ನ ಕವನ ವಿಶ್ಲೇಷಣೆ, ವಿಮರ್ಷೆ ಮಾಡಲು ಅವರಿಗೆ ಎಂಟೆದೆ ಬೇಕು ಎಂದಿದ್ದಾರೆ. ಅವರ ಗದಾಯುದ್ದ ಕಾವ್ಯದಲ್ಲಿ ಶಬ್ದಗಳು ಗದೆಯಂತೆ ಗರ್ಜಿಸುತ್ತವೆ. ಅಷ್ಟರ ಮಟ್ಟಿಗೆ ಅವರು ಜೀವ ತುಂಬಿದ್ದರು. ಉತ್ತರ ಕರ್ನಾಟಕದ ಜನರು ಭಾಗ್ಯವಂತರು ಇದ್ದೇವೆ. ಹಳಗನ್ನಡದ ಕಾಲದಲ್ಲಿ ಕವಿಚಕ್ರವರ್ತಿ, ವಚನ ಸಾಹಿತ್ಯದಲ್ಲಿ ಬಸವಾದಿ ಶರಣರು, ಆಧುನಿಕ ಸಾಹಿತ್ಯದಲ್ಲಿ ಚನ್ನವೀರ ಕಣವಿ, ಆರ್‌.ಸಿ.ಹಿರೇಮಠ, ಗಿರಡ್ಡಿ ಗೋವಿಂದರಾಜ್‌ ದೊಡ್ಡ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಂಟು ಜನರಿಗೆ ಜ್ಞಾನಪೀಠ ಸಿಕ್ಕಿದೆ. ಇವರೆಲ್ಲರ ಕೊಡುಗೆಯನ್ನು ನಾವು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರು, ಕೆಲ ವರ್ಷಗಳ ಬಳಿಕ ಜನರ ಅಪೇಕ್ಷೆಯಂತೆ ರನ್ನ ವೈಭವ ಹಮ್ಮಿಕೊಂಡಿದ್ದು, ಉತ್ಸವಕ್ಕೆ ಸಹಕರಿಸಿದ ಎಲ್ಲರನ್ನು ಸ್ಮರಿಸಿ, ಅಭಿನಂದಿಸಿದರು.

ವೇದಿಕೆಯಲ್ಲಿ ಬೀಳಗಿ ಶಾಸಕ ಜೆ.ಟಿ.ಪಾಟೀಲ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ಪರಿಷತ್‌ ಸದಸ್ಯ ಪಿ.ಎಚ್‌.ಪೂಜಾರ, ರನ್ನ ಬೆಳಗಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೂಪಾ ಹೊಸಟ್ಟಿ, ಮುಧೋಳ ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಸಿಇಒ ಶಶಿಧರ, ಪೊಲೀಸ್‌ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ, ಮುಖಂಡ ವಿನಯ ತಿಮ್ಮಾಪುರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net