ರದ್ದೇವಾಡಗಿ ಹೆಗಲಿಗೆ ಬಿಜೆಪಿ ಸಾರಥ್ಯ

BJP
Published on

ಕಲಬುರಗಿ: ಬಿಜೆಪಿ ಗ್ರಾಮಾಂತರ ಜಿಲ್ಲಾ ನೂತನ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಶಿವರಾಜ ಪಾಟೀಲ್ ರದ್ದೇವಾಡಗಿ ಮತ್ತು ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಆಯ್ಕೆಯಾಗಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮುಖಂಡರ ಅಭಿಪ್ರಾಯ ಆಲಿಸಿದ ಬಳಿಕ ರದ್ದೇವಾಡಗಿ ಆಯ್ಕೆಯನ್ನುವೀಕ್ಷಕರಾದ ರಾಜ್ಯ ಪ್ರಧಾನ ಕಾರ್ಯದರ್ಶಿ  ಮಹೇಶ ಟೆಂಗಿನಕಾಯಿ, ಚುನಾವಣಾಧಿಕಾರಿ ವಿದ್ಯಾಸಾಗರ ಕುಲಕರ್ಣಿ  ಪ್ರಕಟಿಸಿದರು. ವಿಭಾಗೀಯ ಪ್ರಭಾರಿ ರಾಜಕುಮಾರ ಪಾಟೀಲ್ ತೆಲ್ಕೂರ ಹಾಗೂ ಶಾಸಕರು, ಮುಖಂಡರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಈ ಮೂಲಕ ಮತ್ತೊಂದು ಅವಧಿ ಅಧ್ಯಕ್ಷಗಿರಿ ಜೇವರ್ಗಿ  ತಾಲೂಕಿಗೆ ಸಿಕ್ಕಂತಾಗಿದೆ.
ದೊಡ್ಡಪ್ಪಗೌಡ ಪಾಟೀಲ್ ಪಕ್ಷದ ಧ್ವಜವನ್ನು ಶಿವರಾಜ ಪಾಟೀಲ್ ಅವರಿಗೆ ಹಸ್ತಾಂತರಿಸುವ ಮೂಲಕ ಅಧಿಕಾರ ವಹಿಸಿಕೊಟ್ಟು ವಿಶ್ ಹೇಳಿದರು. ಮಹಾನಗರ ಜಿಲ್ಲಾಧ್ಯಕ್ಷರಾದ ಎಂಎಲ್ಸಿ ಬಿ.ಜಿ. ಪಾಟೀಲ್, ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಸುಭಾಷ ಗುತ್ತೇದಾರ್, ಡಾ.ಅವಿನಾಶ ಜಾಧವ್, ಯುವ ನಾಯಕ ಚಂದ್ರಕಾಂತ (ಚಂದು) ಪಾಟೀಲ್ ಇತರರು ಶುಭ ಕೋರಿದರು.
ನೂತನ ಅಧ್ಯಕ್ಷರ ಆಯ್ಕೆ ಪ್ರಕಟವಾಗುತ್ತಿದ್ದಂತೆ ರದ್ದೇವಾಡಗಿ ಅಭಿಮಾನಿಗಳು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಪ್ರವಾಹದಂತೆ ಹರಿದು ಬಂದು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜೇವರ್ಗಿ ತಾಲೂಕಿನ ಮಲ್ಲಿನಾಥ ಪಾಟೀಲ್ ಯಲಗೋಡ, ರೇವಣಸಿದ್ದ ಸಂಕಾಲಿ, ಬಸನಗೌಡ ಪಾಟೀಲ್, ಬಾಪುಗೌಡ ಪಾಟೀಲ್ ಇತರರು ಸನ್ಮಾನಿಸಿದರು.
ಮುಖಂಡರಾದ ಸುಭಾಷ ಬಿರಾದಾರ, ಹರ್ಷಾನಂದ ಗುತ್ತೇದಾರ್, ರವಿ ಬಿರಾದಾರ, ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ, ಉಪಾಧ್ಯಕ್ಷ ರಾಜಕುಮಾರ ಕೋಟೆ, ಪ್ರಮುಖರಾದ ದಯಾಘನ್ ಧಾರವಾಡಕರ್, ಉಮೇಶ ಪಾಟೀಲ್, ವಿಜಯಕುಮಾರ ಹಳಕಟ್ಟಿ, ಶರಣಬಸಪ್ಪ ಅಂಬೆಸಿಂಗೆ, ಸಂಗಣ್ಣ ಇಜೇರಿ, ರೇಣುಕಾಚಾರ್ಯ, ನಾಮದೇವ ರಾಠೋಡ್, ರಾಜುಗೌಡ ನಾಗನಹಳ್ಳಿ, ವಿಠ್ಠಲ್ ಜಾಧವ್ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಮುಖಂಡರ ಮಾರ್ಗದರ್ಶನದಲ್ಲಿ ಸಂಘಟನೆ
ಪಕ್ಷದ ಮುಖಂಡರು, ನಾಯಕರು, ಕಾರ್ಯಕರ್ತರ ಸಲಹೆ ಪಡೆದು ಸಂಘಟನೆಯನ್ನು ಇನ್ನಷ್ಟು ಮಾದರಿಯಾಗಿ ಮಾಡಲು ಶ್ರಮಿಸುವುದಾಗಿ ಬಿಜೆಪಿ ಗ್ರಾಮಾಂತರ ನೂತನ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಭರವಸೆ ನೀಡಿದರು.
ನಾಯಕರೆಲ್ಲರೂ ಸೇರಿ ನನ್ನ ಮೇಲೆ ವಿಶ್ವಾಸವಿಟ್ಟು ಕಿರಿಯ ವಯಸ್ಸಿನಲ್ಲಿಯೇ ಮಹತ್ವದ ಹೊಣೆ ವಹಿಸಿದ್ದು, ನಂಬಿಕೆಗೆ ಚ್ಯುತಿ ಬರದಂತೆ ಕೆಲಸ ಮಾಡುವೆ. ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ಹೇಳಿದರು.
ಮುಖಂಡರ ಜತೆ ಸಮಾಲೋಚನೆ ನಡೆಸಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು. ಸರ್ಕಾರದ ವಿವಿಧ ಹಂತಗಳಲ್ಲಿ ಕಾರ್ಯಕರ್ತರಿಗೆ ಪ್ರಾತಿನಿಧ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ರಾಜ್ಯ ಮತ್ತು ಕೇಂದ್ರದಲ್ಲಿ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದು, ಜನಪರ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಲಾಗುವುದು. ಸಿಎಎ ಬಗ್ಗೆ ಕಾಂಗ್ರೆಸ್ ಅನಗತ್ಯ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ. ಈ ಕುರಿತು ಬಿಜೆಪಿ ಆರಂಭಿಸಿರುವ ಸಿಎಎ ಜಾಗೃತಿ ಅಭಿಯಾನ ಇನ್ನಷ್ಟು ಚುರುಕುಗೊಳಿಸುವುದಾಗಿ ರದ್ದೇವಾಡಗಿ ತಿಳಿಸಿದರು.

ಯುವಶಕ್ತಿ ಮೇಲೆ ಬಿಜೆಪಿ ನಾಯಕರು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಅವರಿಗೆ ಅಪಾರ ನಂಬಿಕೆ ಇದೆ. ಸಬ್ ಕಾ ವಿಕಾಸ್ ಸಬಾ ಕಾ ಸಾಥ್ ಜತೆಗೆ ಸಬ್ ಕಾ ವಿಶ್ವಾಸ್ ಅಡಿ ಸಂಘಟನೆ ಮಾಡಲಾಗುವುದು. ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಬಳಿ ಹೋಗಿ ಸದಸ್ಯತ್ವ ಹೆಚ್ಚು ಮಾಡಲಾಗುವುದು. ಎಲ್ಲರೂ ಸಹಕಾರ ನೀಡುವ ವಿಶ್ವಾಸವಿದೆ.
| ಶಿವರಾಜ ಪಾಟೀಲ್ ರದ್ದೇವಾಡಗಿ ಬಿಜೆಪಿ ಗ್ರಾಮಾಂತರ ಜಿಲ್ಲಾ ನೂತನ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net