

ಕೊಟ್ಟೂರು: ಚಿರಬಿ ಮತ್ತು ರಾಂಪುರ ನಡುವೆ ಇರುವ ಶ್ರೀ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಂಗಳವಾರ ಭೇಟಿ ನೀಡಿ, ದೇವಾಲಯ ಮತ್ತು ರಥ ಪರಿಶೀಲಿಸಿದರು.
ದೇವಾಲಯದ ಮೇಲೆ ಹಕ್ಕು ಸಾಧಿಸುವ ದೃಷ್ಟಿಯಿಂದ ರಾಂಪುರ ಮತ್ತು ಚಿರಬಿ ಗ್ರಾಮಸ್ಥರ ನಡುವೆ ಗಲಾಟೆಯಾಗಿ ವ್ಯಾಜ್ಯ ಕೋರ್ಟ್ ಮೆಟ್ಟಲೇರಿದ್ದರಿಂದ 17 ವರ್ಷಗಳಿಂದ ರಥೋತ್ಸವ ರದ್ದಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಉಭಯ ಗ್ರಾಮಸ್ಥರ ಸಹಕಾರ ಮತ್ತು ಕಾನೂನು ಮಾರ್ಗದರ್ಶನದಲ್ಲಿ ರಥೋತ್ಸವ ನಡೆಸುವ ಬಗ್ಗೆ ಮಾಹಿತಿ ನೀಡಿದ್ದು, ಇದು ಭಕ್ತರಲ್ಲಿ ಹರ್ಷವನ್ನುಂಟು ಮಾಡಿದೆ ಎಂದರು.
ಶ್ರೀ ಮೂಗಬಸವೇಶ್ವರ ದೇವಾಲಯ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಸೇರಿದೆ. ಆದ್ದರಿಂದ ರಥೋತ್ಸವ ಮಾಡಲು ಉಭಯ ಗ್ರಾಮಸ್ಥರು ಆಕ್ಷೇಪಿಸುವಂತಿಲ್ಲ. ರಥೋತ್ಸವ ನಿಲ್ಲಿಸುವ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯ ಇಲ್ಲ. ಕಾನೂನು ಸುವ್ಯವಸ್ಥೆ ಹದಗೆಡಬಾರದು ಎಂಬ ದೃಷ್ಟಿಯಿಂದ ರಥೋತ್ಸವ ರದ್ದಾಗಿದೆ ಹೊರತು ಬೇರೆ ಕಾರಣಗಳಿಲ್ಲ ಎಂದು ಗ್ರಾಮಸ್ಥರಿಗೆ ಮನವಿರಿಕೆ ಮಾಡಿದರು.
ರಥೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯರ ಒಳಿತಿಗಾಗಿ ನಡೆಯುತ್ತವೆ. ಆದ್ದರಿಂದ ರಥೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವುದು ಯಾರಿಗೂ ಒಳ್ಳೆಯದಲ್ಲ. ಪ್ರತಿ ಅಮಾವಾಸ್ಯೆಗೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಬೇಕು. ದೇವಸ್ಥಾನದ ಭೂಮಿ ಹದ್ದುಬಸ್ತು ಮಾಡಿಸುವಂತೆ ಡಿಸಿ ಆದೇಶಿಸಿದರು.
ತಹಸೀಲ್ದಾರ್ ಜಿ.ಕೆ.ಅಮರೇಶ, ತಾಪಂ ಇಒ ಡಾ. ಆನಂದ, ಸಿಪಿಐ ವೆಂಕಟಸ್ವಾಮಿ, ಎಸ್‌ಐ ಗೀತಾಂಜಲಿ ಶಿಂಧೆ, ದೇವಾಸ್ಥಾನದ ಇಒ ಹನುಮಂತಪ್ಪ, ಡಾ.ಬಿ.ಸಿ. ಮೂಗಪ್ಪ, ಎಂ.ಎಂ.ಜೆ. ಮೂಗಣ್ಣ, ರಾಂಪುರ ಭರಮಪ್ಪ, ಬಸವನಗೌಡ, ಮದ್ದಾನಪ್ಪ, ನಾಗಭೂಷಣ, ವೀರಯ್ಯ, ಗಂಗಾಧರ, ಪಿ. ನಾಗರಾಜ್, ಅಂಗಡಿ ಮಂಜುನಾಥ ಮುಂತಾದವರಿದ್ದರು.