ರಥೋತ್ಸವ ಯಶಸ್ಸಿಗೆ ಕೈಜೋಡಿಸಿ

24ujjani
Published on

ಉಜ್ಜಿನಿ: ಗ್ರಾಮದಲ್ಲಿ ಜಗದ್ಗುರು ಶ್ರೀ ಮರುಳಸಿದ್ಧೇಶ್ವರ ಸ್ವಾಮಿಗಳ ರಥೋತ್ಸವ ಹಾಗೂ ಶಿಖರ ತೈಲಾಭಿಷೇಕ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲ ಭಕ್ತರು ಕೈ ಜೋಡಿಸಬೇಕು. ಪೊಲೀಸ್ ಇಲಾಖೆ ಕೈಗೊಳ್ಳುವ ಎಲ್ಲ ಕ್ರಮಗಳಿಗೆ ಸಹಕಾರ ನೀಡಬೇಕು ಎಂದು ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಕೋರಿದರು.

ಗ್ರಾಮದ ಪೊಲೀಸ್ ಉಪ ಠಾಣೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಗುರುವಾರ ಮಾತನಾಡಿದರು. ರಥೋತ್ಸವ ಹಾಗೂ ತೈಲಾಭಿಷೇಕಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಜನ ಜಂಗುಳಿಯಲ್ಲಿ ಯಾರಾದರೂ ಕಾನೂನು ಬಾಹಿರ ಚಟುವಟಿಕೆಗೆ ಮುಂದಾದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಾತ್ರೆಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಮುನ್ನಚ್ಚರಿಕೆ ಕ್ರಮವಾಗಿ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳಲಿದೆ. ಜನರ ನಿಯಂತ್ರಣಕ್ಕಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುವುದು. ಎರಡು ದಿನಗಳ ಅದ್ದೂರಿ ಧಾರ್ಮಿಕ ಕಾರ್ಯಗಳ ಯಶಸ್ಸಿಗೆ ಎಲ್ಲ ಭಕ್ತರು ಕೈಜೋಡಿಸಬೇಕು ಎಂದರು.

ಕೊಟ್ಟೂರು ಸಿಪಿಐ ವೆಂಕಟಸ್ವಾಮಿ ಮಾತನಾಡಿ, ದರ್ಶನಕ್ಕೆ ಜನರು ನೂಕು ನುಗ್ಗಲು ಉಂಟು ಮಾಡದೆ ಸಾಲು ನಿಲ್ಲಬೇಕು. ರಥ ಸಾಗುವ ಮಾರ್ಗದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಹಾಕದಂತೆ ಗ್ರಾಪಂನಿಂದ ಕ್ರಮ ತೆಗೆದುಕೊಳ್ಳಬೇಕು. ಜಾತ್ರೆಗೆ ಆಗಮಿಸುವ ಭಕ್ತರ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ನೀರು, ನೈರ್ಮಲ್ಯಕ್ಕೆ ಸ್ಥಳೀಯ ಆಡಳಿತ ಆದ್ಯತೆ ನೀಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net