ರಥದ ಬೀದಿಯ ಮರಳು ತೆರವಿಗೆ ಒತ್ತಾಯ

Published on

ಚಾಮರಾಜನಗರ : ಇತಿಹಾಸ ಪ್ರಸಿದ್ಧ ಶ್ರೀಚಾಮರಾಜೇಶ್ವರಸ್ವಾಮಿ ರಥೋತ್ಸವ ಸುಗಮ ರೀತಿಯಲ್ಲಿ ಸಾಗಲು ರಥದ ಬೀದಿಯಲ್ಲಿ ಹಾಕಿದ್ದ ಮರಳನ್ನು ಆದಷ್ಟು ಬೇಗ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಜು.10 ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು. ರಥ ಸುಗಮವಾಗಿ ಸಂಚರಿಸಲು ಹಾಗೂ ರಥಕ್ಕೆ ಎಸೆಯುವ ಬಾಳೆಹಣ್ಣಿನಿಂದ ಜನರು ಜಾರಿ ಬೀಳದಂತೆ ನೋಡಿಕೊಳ್ಳುವ ಉದ್ದೇಶದಿಂದ ರಥಸಾಗುವ ಬೀದಿಯಲ್ಲಿ ಮರಳನ್ನು ಹರಡಲಾಗಿತ್ತು. ಅದರಂತೆ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ದೊಡ್ಡ ಗಣಪತಿ ಕೂರಿಸುವ ರಸ್ತೆ, ಎಸ್‌ಬಿಐ ಬ್ಯಾಂಕ್ ರಸ್ತೆ, ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆ, ಮಾರಿಗುಡಿ ರಸ್ತೆ ಹಾಗೂ ಮಾರುಕಟ್ಟೆ ರಸ್ತೆಯಲ್ಲಿ ಮರಳನ್ನು ಹಾಕಲಾಗಿತ್ತು. ರಥದ ಬೀದಿ ಜನನಿಬಿಡ ರಸ್ತೆಯಾಗಿದ್ದು, ನಿತ್ಯವೂ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಮರಳು ಹೆಚ್ಚು ದಿನ ಇದ್ದರೇ ವಾಹನ ಸವಾರರಿಗೆ, ಅಂಗಡಿ ಮಾಲೀಕರಿಗೆ ಹಾಗೂ ಪಾದಚಾರಿಗಳಿಗೆ ತುಂಬಾ ಸಮಸ್ಯೆ ಉಂಟಾಗುತ್ತದೆ. ಆಗಾಗಿ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಆದಷ್ಟು ಬೇಗ ಮರಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಸ್ತೆ ಧೂಳುಮಯವಾಗುತ್ತಿದೆ: ರಥೋತ್ಸವ ನಡೆದು 3 ದಿನ ಕಳೆದಿದ್ದು, ಈಗಲೇ ರಸ್ತೆಯಲ್ಲಾ ಧೂಳುಮಯವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರ ಮಾಡುತ್ತಿರುವುದರಿಂದ ಹಾಗೂ ಹೆಚ್ಚು ಗಾಳಿ ಬೀಸುತ್ತಿರುವುದರಿಂದ ಸಾರ್ವಜನಿಕರು ಮುಖ ಮುಚ್ಚಿಕೊಂಡು ಓಡಾಡುವಂತೆಹ ಪರಿಸ್ಥಿತಿ ಉಂಟಾಗಿದೆ. ಗಾಳಿ ಬೀಸಿದಾಗ ಕೆಲವು ಅಂಗಡಿ ಮುಂಗಟ್ಟುಗಳ ಮಾಲೀಕರು ಕಿರಿಕಿರಿ ಅನುಭವಿಸುವಂತಾಗಿದೆ. ಹಣ್ಣು, ತರಕಾರಿ, ಸೊಪ್ಪು ಹಾಗೂ ಇನ್ನಿತರೆ ಪದಾರ್ಥಗಳನ್ನು ಮಾರಾಟ ಮಾಡುವವರಿಗೂ ಸಮಸ್ಯೆ ಉಂಟಾಗುತ್ತಿದೆ. ಕಳೆದ ವರ್ಷದ ರಥೋತ್ಸವದಲ್ಲಿ ಹೆಚ್ಚುದಿನ ಮರಳನ್ನು ತೆರವುಗೊಳಿಸದೇ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಕಳೆದ ರಥೋತ್ಸವದ ವೇಳೆಯಲ್ಲಿ ರಸ್ತೆಯಲ್ಲಿ ಮರಳನ್ನು ಮಾತ್ರ ಹಾಕಿದ್ದರು. ಆದರೆ ಈ ಬಾರಿ ಹೆಚ್ಚು ಮಣ್ಣು ಮಿಶ್ರಿತ ಮರಳನ್ನು ಹಾಕಿದ್ದು, ಇದರಿಂದ ಧೂಳು ಹೆಚ್ಚಾಗುತ್ತಿದೆ. ಮಳೆ ಬಂದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವ ಮುನ್ನಾ ಎಚ್ಚೆತ್ತುಕೊಂಡು ಮರಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳೆದ ವರ್ಷ ಸೂಕ್ತಸಮಯಕ್ಕೆ ಮರಳನ್ನು ತೆರವುಗೊಳಿಸದೇ ಮಳೆ ಬಂದು ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಈ ಬಾರಿ ಮಣ್ಣು ಮಿಶ್ರಿತ ಮರಳನ್ನು ಹರಡಿರುವುದರಿಂದ ಗಾಳಿಗೆ ರಥದ ಬೀದಿ ಧೂಳುಮಯವಾಗಿದೆ. ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಆದಷ್ಟು ಬೇಗ ಮರಳನ್ನು ತೆರವುಗೊಳಿಸಬೇಕು. ಸುಮಗ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಜಯಕುಮಾರ್, ಅಧ್ಯಕ್ಷ, ಜಿಲ್ಲಾ ಉಪ್ಪಾರ ಯುವಕರ ಸಂಘ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net