

ಹೂವಿನಹಡಗಲಿ: ಲೋಕದಲ್ಲಿರುವ ಸಕಲ ಜೀವಿಗಳೂ ಸಂತಸದಿಂದಿರಬೇಕು ಎಂಬ ಕಾರಣಕ್ಕೆ ಭಗವಾನ್ ಮಹಾವೀರರು ಅಹಿಂಸೆಯೇ ಪರಮ ಧರ್ಮ ಎಂಬ ಸಂದೇಶ ಸಾರಿದರು ಎಂದು ತಹಸೀಲ್ದಾರ್ ಸಂತೋಷ್ ಕುಮಾರ್ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಮಹಾವೀರರ ಪ್ರಕಾರ ಜೀವನದ ಪಾಪಗಳನ್ನು ಪೂಜೆ ಅಥವಾ ಪ್ರಾರ್ಥನೆಗಳಿಂದ ತೊಳೆಯಲಾಗುವುದಿಲ್ಲ. ನಮ್ಮ ಸದ್ಗುಣ ಹಾಗೂ ನಡವಳಿಕೆಗಳಿಂದ ಪಾಪಗಳನ್ನು ತಪ್ಪಿಸಿಕೊಳ್ಳಬಹುದು. ಮನುಷ್ಯರ ಜೀವನ ಉತ್ತಮವಾಗಲು ರತ್ನತ್ರಯಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರೃ ಪಾಲಿಸಬೇಕು ಎಂದರು.
ಜೈನ ಧರ್ಮದವರಿಂದ ಪಟ್ಟಣದ ಜೈನಮಂದಿರದಲ್ಲಿ ಮಹಾವೀರರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹಾವೀರರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಜೈನ ಸಮಾಜದ ತಾಲೂಕು ಅಧ್ಯಕ್ಷ ಎಚ್.ಎಸ್.ಪ್ರಶಾಂತ್, ಉಪಾಧ್ಯಕ್ಷ ವಿಜಯಕುಮಾರ್ ಜೈನ್, ಕಾರ್ಯದರ್ಶಿ ಪದ್ಮರಾಜ್, ಸದಸ್ಯರಾದ ಅಜಿತ್, ಅಮಿತ್, ರಾಯಪ್ಪ, ವಕೀಲ ಮಂಜುನಾಥ ಜೈನ್, ಪುರಸಭೆ ಮಾಜಿ ಸದಸ್ಯ ಸಂತೋಷ್ ಜೈನ್ ಇತರರಿದ್ದರು.