ರತಿಮನ್ಮಥ ಸ್ವಾಮಿ ಮುತ್ತಿನಪಲ್ಲಕ್ಕಿ ಉತ್ಸವ

2025
Published on

ತ್ಯಾಮಗೊಂಡ್ಲು: ಗ್ರಾಮೀಣ ಸೊಗಡಿನ ಕಲೆಯನ್ನು ಹೊಂದಿದ ಶ್ರೀ ರತಿ ಮನ್ಮಥಸ್ವಾಮಿಯ 72ನೇ ವಿಜಯೋತ್ಸವ ಶುಕ್ರವಾರ ರಾತ್ರಿ ವೈಭವದಿಂದ ಸಂಪನ್ನವಾಯಿತು.

ಪಟ್ಟಣದ ದೇವರಾಜ್​ ಮೊದಲಿಯಾರ್​ ವೃತ್ತದ ಕಾಮನ ಭಜನಾ ಮಂದಿರದಲ್ಲಿ ವಾರದ ಹಿಂದೆ ಪ್ರಾರಂಭವಾದ ಈ ಉತ್ಸವದ ಪೂಜಾ ಕಾರ್ಯಕ್ರಮದ ಭಾಗವಾಗಿ ರತಿ ಹಾಗೂ ಮನ್ಮಥಸ್ವಾಮಿ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ರಾತ್ರಿ ಬಾಣ ಬಿರುಸು ಮದ್ದಿನ ಮರಗಳ ಸುಡುವಿಕೆಯಿಂದ ಉತ್ಸವಕ್ಕೆ ತೆರೆಬಿದ್ದಿತು.

ವಾರ ಪೂರ್ತಿ ಪೂಜೆ ಸಲ್ಲಿಸಿದ ಮೂರ್ತಿಗಳಿಗೆ ಮುತ್ತಿನಪಲ್ಲಕ್ಕಿಯಲ್ಲಿ ಪ್ರಮುಖ ಬೀದಿಯಲ್ಲಿ ಮೆರವಣೆಗೆ ಮಾಡಲಾಯಿತು.

ಅತ್ತಿಬೆಲೆಯ ಎಂ.ಮುನಿಯಪ್ಪ ತಂಡದಿಂದ ಕೀಲು ಕುದುರೆ, ಮರಳಕುಂಟೆ ಗ್ರಾಮದ ಹರ್ಷಕುಮಾರ್​ ಮತ್ತು ತಂಡದವರಿಂದ ವೀರಗಾಸೆ, ದೊಡ್ಡರಾಜು ಮತ್ತು ತಂಡದವರಿಂದ ತಮಟೆ ವಾದ್ಯ ಸೇರಿ ಹಲವಾರು ಜಾನಪದ ಕಲಾತಂಡಗಳು ಪ್ರದರ್ಶನ ನೀಡಿದವು.

ತುಮಕೂರಿನ ಕರ್ನಾಟಕ ಫೈರ್​ ವರ್ಕ್ಸ್​ ಮಾಲೀಕ ನಿಸಾರ್​ ಅಹಮದ್​ಖಾನ್​ ತಂಡದವರಿಂದ ವಿವಿಧ ಬಗೆಯ ಬಾಣ ಬಿರಸುಗಳಿಂದ ಮದ್ದಿನಮರ ಸುಡುವಿಕೆ ನಡೆಯಿತು.ಇನ್​ಸ್ಪೆಕ್ಟರ್​ ರಂಜನ್​ಕುಮಾರ್​ ನೇತೃತ್ವದಲ್ಲಿ ಪೊಲೀಸ್​ ಬಂದೋಬಸ್ತ್​ ನಿಯೋಜಿಸಲಾಗಿತ್ತು.ಉತ್ಸವದಲ್ಲಿ ಕಾಮನ ಭಜನೆ ಮಂಡಳಿ ಮುಖ್ಯಸ್ಥರಾದ ಟಿ.ಡಿ.ಕೇಶವನ್​, ಶಿವರಾಜು, ಕುಮಾರಸ್ವಾಮಿ ಮೊದಲಿಯಾರ್​, ಜಗದೀಶ್​ ಹಂದೆ, ಸತೀಶ್​ ಹಂದೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net