

ಮಡಿಕೇರಿ: ವಿಶ್ವಕಲಾ ದಿನಾಚರಣೆಯ ಅಂಗವಾಗಿ ಕೊಡಗು ವಿದ್ಯಾಲಯದ ವತಿಯಿಂದ ಮಡಿಕೇರಿಯ ರಾಜಾಸೀಟಿನಲ್ಲಿ ಸಮಾಗಮ ಬೇಸಿಗೆ ಶಿಬಿರದ ಸುಮಾರು ೫೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಹಾಗೂ ಕಲಾ ಶಿಕ್ಷಕರಾದ ಬಿ.ಪ್ರಸನ್ನ ಕುಮಾರ್, ಪ್ರದೀಪ್ ಹಾಗೂ ಪವನ್‌ರವರೊಂದಿಗೆ ಸ್ಥಳದಲ್ಲಿಯೇ ಪ್ರಕೃತಿ ರಮಣೀಯ ಹಸಿರ ಸೊಬಗನ್ನು ತಮ್ಮ ಕುಂಚದಲ್ಲಿ ಅರಳಿಸುವ ಮೂಲಕ ವಿಶ್ವ ಕಲಾ ದಿನಾಚರಣೆಯನ್ನು ಭಾನುವಾರ ಆಚರಿಸಿದರು.
ಮುಖ್ಯ ಅತಿಥಿಯಾಗಿದ್ದ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಮಾತನಾಡಿ, ಚಿತ್ರಕಲೆ ಹವ್ಯಾಸವನ್ನಾಗಿ ಇದ್ದಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದರು.
ಈ ಸಂದರ್ಭ ಅವರು ತಮ್ಮ ತಂದೆಯ ಕೊಡುಗೆಯ ಬಗ್ಗೆ ಹೇಳುತ್ತಾ ಅವರಿಂದಾಗಿ ತಾನು ಕ್ರೀಡೆ ಹಾಗೂ ಕಲೆಯಲ್ಲಿ ಅಭಿರುಚಿ ಬೆಳೆಸಿಕೊಳ್ಳಲು ಕಾರಣವಾಯಿತು. ತನ್ನ ಐಎಎಸ್ ಸಂದರ್ಶನ ವೇಳೆಯಲ್ಲಿ ಹವ್ಯಾಸದ ಕುರಿತು ಹೆಚ್ಚಿನ ಪ್ರಶ್ನೆಗಳಿದುದ್ದನ್ನು ಸಹ ಸ್ಮರಿಸಿಕೊಂಡರು. ನಾವು ಹವ್ಯಾಸವನ್ನು ಬೆಳೆಸಿಕೊಂಡರೆ ನಮ್ಮ ಜೀವನದಲ್ಲಿ ತಾಳ್ಮೆ ಮತ್ತು ಸಹನೆಯನ್ನು ಬೆಳೆಸಿಕೊಳ್ಳಬಹುದು ಎಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಪ್ರಾಂಶುಪಾಲರು, ಆಡಳಿತ ನಿರ್ವಹಣಾಧಿಕಾರಿಗಳು ಪೋಷಕ ವೃಂಧದವರು, ಶಿಬಿರಾರ್ಥಿಗಳು, ಶಿಕ್ಷಕ ವೃಂದದವರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ಚಿತ್ರಕಲೆಗಳು ಮೂಡಿ ಬಂದವು.