

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಮಿತಿ ರಚನೆ ಮಾಡಲು ನಿಧಾನಗತಿ ಧೋರಣೆ ಅನುಸರಿಸುತ್ತಿರುವುದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ. ಜುಲೈನಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಆಗಬೇಕಾಗಿದೆ. ಕೇಂದ್ರ ಮಾದರಿ ವೇತನಕ್ಕಾಗಿ ರಾಜ್ಯ ಸರ್ಕಾರಿ ನೌಕರರ ಪಟ್ಟು ಹಿಡಿದಿದ್ದಾರೆ. ಸಮಿತಿ ರಚನೆಗೆ ತಡ ಆಗುತ್ತಿರುವುದರಿಂದ ನಿಗದಿತ ಅವಧಿಗೆ ವೇತನ ಪರಿಷ್ಕರಣೆ ಆಗುವುದೇ ಎಂಬ ಅನುಮಾನ ನೌಕರರನ್ನು ಕಾಡುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ನಲ್ಲಿ ನೌಕರರ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪವನ್ನೇ ಮಾಡಲಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒತ್ತಡಕ್ಕೆ ಮಣಿದು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಅಧಿಕಾರಿಗಳ ಸಮಿತಿ ರಚನೆ ಮಾಡುವ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಭರವಸೆ ನೀಡಿ ಎರಡು ತಿಂಗಳು ಕಳೆಯುತ್ತ ಬಂದಿದೆ. ಬಜೆಟ್ ಘೋಷಣೆಗಳೆಲ್ಲವೂ ಏಪ್ರಿಲ್ ಅಂತ್ಯದೊಳಗೆ ಆದೇಶವಾಗಬೇಕೆಂದು ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯಲ್ಲಿ ಒಂದು ಸಭೆ ನಡೆದಿರುವುದು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಬೆಳವಣಿಗೆಗಳು ಆಗಿಲ್ಲ.
ಇದೀಗ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಮಿತಿಯ ಘೋಷಣೆಯೂ ಸಾಧ್ಯವಿಲ್ಲ. ಚುನಾವಣೆ ಮುಗಿದ ನಂತರವಷ್ಟೇ ಹಣಕಾಸು ಇಲಾಖೆ ಸಿಎಂಗೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಮುಖ್ಯಮಂತ್ರಿ ಒಪ್ಪಿದ ನಂತರ ಸಮಿತಿಗೆ ನೇಮಕ ಮಾಡಬೇಕು, ಸಿಬ್ಬಂದಿ ನೀಡಬೇಕು. ವರದಿ ನೀಡಬೇಕು. ಆನಂತರ ಸಿಎಂ ಒಪ್ಪಿಗೆ ನೀಡಿ ವೇತನ ಪರಿಷ್ಕರಣೆ ಜಾರಿಗೆ ಬರಬೇಕಾಗುತ್ತದೆ. ಸಮಿತಿಗೆ ಹಾಲಿ ಅಥವಾ ನಿವೃತ್ತ ಅಧಿಕಾರಿಯನ್ನು ನೇಮಕ ಮಾಡಬೇಕೋ ಎಂಬ ವಿಷಯ ಸಹ ಚರ್ಚೆಯಲ್ಲಿದೆ. ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿಯೇ ಸಮಿತಿ ರಚನೆಯಾಗಬೇಕು ಎಂಬ ಬೇಡಿಕೆಯೂ ಇದೆ. ಹಣಕಾಸು ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆಯಾದ ನಂತರ ಮುಖ್ಯಮಂತ್ರಿ ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ಮುಖ್ಯಮಂತ್ರಿ ಅವರು ಸಮಿತಿ ರಚನೆಗೆ ಒಪ್ಪಿಗೆ ನೀಡಿದ್ದಾರೆ. ಹಣಕಾಸು ಇಲಾಖೆ ಜತೆಗೆ ಮುಂದಿನ ವಾರದಲ್ಲಿ ಮತ್ತೊಂದು ಸಭೆ ನಡೆಸಿ ಆದಷ್ಟು ಬೇಗ ಪ್ರಸ್ತಾವನೆ ಸಲ್ಲಿಸುವಂತೆ ನೋಡಿಕೊಳ್ಳಲಾಗುವುದು. ಕೇಂದ್ರ ಮಾದರಿ ವೇತನವನ್ನು ಪಡದೇ ಪಡೆಯುತ್ತೇವೆ. ಆ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. | ಸಿ.ಎಸ್. ಷಡಾಕ್ಷರಿ ಅಧ್ಯಕ್ಷ, ಸರ್ಕಾರಿ ನೌಕರರ ಸಂಘ ಜುಲೈನಿಂದಲೇ ವೇತನ ಪರಿಷ್ಕರಣೆ ನಿರೀೆಯಲ್ಲಿ ಸರ್ಕಾರಿ ನೌಕರರು ಇದ್ದೇವು. ಆದರೆ ಸರ್ಕಾರ ನಿಧಾನಗತಿ ಧೋರಣೆ ಅನುಸರಿಸುತ್ತಿರುವುದು ನೌಕರರಿಗೆ ಮಾಡುವ ಮೋಸವಾಗಿದೆ. ಈಗಲೂ ಕಾಲ ಮಿಂಚಿಲ್ಲ, ಜುಲೈನಿಂದ ಜಾರಿಯಾಗುವಂತೆ ತಕ್ಷಣ ಸಮಿತಿ ರಚನೆ ಮಾಡಲಿ. ನೌಕರರ ಕಣ್ಣೊರೆಸುವ ತಂತ್ರ ಬಿಡಲಿ. | ಪಿ. ಗುರುಸ್ವಾಮಿ ಅಧ್ಯಕ್ಷ, ಸಚಿವಾಲಯ ನೌಕರರ ಸಂಘ