

ಮೈಸೂರು: ತಾವು ಓದಿದ ಯುವರಾಜ ಕಾಲೇಜಿನಲ್ಲಿ ಸಂಗೀತ ನಿರ್ದೇಶಕ, ಹಿನ್ನೆಲೆ ಗಾಯಕ ರಘು ದೀಕ್ಷಿತ್ ಅವರು ಸಂಗೀತದ ಕೋಲ್ಮಿಂಚು ಹರಿಸಿದರು. ಇದಕ್ಕೆ ಸ್ಪಂದಿಸಿದ ವಿದ್ಯಾರ್ಥಿಗಳು ಸಹ ರಾಗಲಹರಿಯ ಹರ್ಷೋದ್ಗಾರದಲ್ಲಿ ಮಿಂದೆದ್ದರು.
ಕಾಲೇಜಿನ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಗುರುವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಯಿತು.
ಇದರೊಂದಿಗೆ 2024-25ನೇ ಸಾಲಿನ ‘ಜ್ಞಾನವಾಹಿನಿ’ಯ ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ, ಎನ್‌ಸಿಸಿ, ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಗೀತ ಕಲಾವಿದ ರಘು ದೀಕ್ಷಿತ್ ಗಾಯನ ಮೋಡಿಗೆ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು.
ದೀಕ್ಷಿತ್ ಇಲ್ಲಿಯ ಹಳೇ ವಿದ್ಯಾರ್ಥಿ. ಬಿಎಸ್ಸಿ ಕಲಿತಿರುವ ಅವರು, ಪಾಠಪ್ರವಚನ, ಪ್ರಾಯೋಗಿಕ ತರಗತಿ, ಸಹಪಾಠಿಗಳೊಂದಿಗೆ ಹರಟೆ ಹೊಡೆದ ಜಾಗದಲ್ಲೇ ಸಂಗೀತ ರಸದೌತಣವನ್ನು ಯುವ ಮನಸ್ಸುಗಳಿಗೆ ಉಣಬಡಿಸಿದರು.
ಸುದೀಪ್ ನಿರ್ದೇಶನದ ‘ಜಸ್ಟ್ ಮಾತ್ ಮಾತಲ್ಲಿ’ ಸಿನಿಮಾದ ಟೈಟಲ್ ಸಾಂಗ್ ಅನ್ನು ಸೊಗಸಾಗಿ ಹಾಡಿ ಸಭಿಕರನ್ನು ರಂಜಿಸಿದರು. ಜತೆಗೆ, ಇದೇ ಚಿತ್ರದ ‘ಮುಂಜಾನೆ ಮಂಜಲ್ಲಿ’ ಗೀತಗಾಯನವೂ ಕಿವಿಗಳಿಗೆ ಇಂಪು ನೀಡಿತು.
ರಘು ಅವರು ಜಾನಪದ ಗೀತೆ ‘ಕೋಡಗನ ಕೋಳಿ ನುಂಗಿತ್ತಾ...’ ಹಾಡನ್ನು ಹಾಡುತ್ತಿದ್ದಂತೆ ನೆರೆದಿದ್ದ ವಿದ್ಯಾರ್ಥಿಗಳು ತಾವೂ ಧ್ವನಿಗೂಡಿಸುತ್ತಾ ಸಂಗೀತಕ್ಕೆ ತಲೆದೂಗಿದರು. ಶಿಶುನಾಳ ಶರೀಫ ಅವರ ‘ಗುಡುಗುಡಿಯ ಸೇದಿ ನೋಡೋ’ ಹಾಡು ಸಹ ಎಲ್ಲರನ್ನೂ ರಂಜಿಸಿತು.
ಶರೀಫ್ ಮತ್ತೊಂದು ಹಾಡು ‘ಲೋಕದ ಕಾಳಜಿ ಮಾಡತೇನಂತಿ’ ಗೀತೆಯ ರಾಗಲಹರಿಯೊಂದಿಗೆ ಧೂಳೆಬ್ಬಿಸಿದರು. ಹೀಗೆ ಫ್ಯೂಷನ್‌ನಲ್ಲಿ ಕನ್ನಡದ ಜಾನಪದ ಮತ್ತು ಕನ್ನಡ ಚಲನಚಿತ್ರಗಳನ್ನು ತಮ್ಮ ವಿಶಿಷ್ಟ ಕಂಠದ ಮೂಲಕ ಪ್ರಸ್ತುತಪಡಿಸಿ ನೆರೆದವರ ಮನಗೆದ್ದರು. ಇವರ ಅಬ್ಬರದ ಗಾಯನಕ್ಕೆ ವಿದ್ಯಾರ್ಥಿಗಳು ಹುಚ್ಚೆದ್ದು ಕುಣಿದರು.
ಕೆಲ ಹಾಡುಗಳಿಗೆ ವಿದ್ಯಾರ್ಥಿಗಳು ಧ್ವನಿಗೂಡಿಸಿದರು. ಕೆಲವರು ಅವರ ಹಾಡುಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಓದು ಬಹಳ ಮುಖ್ಯ. ಮೊದಲು ಶಿಕ್ಷಣ ಕಡೆಗೆ ಗಮನ ನೀಡಿ. ಬಳಿಕ ತಮ್ಮ ಇತರ ಹವ್ಯಾಸಗಳಿಗೆ ಆದ್ಯತೆ ನೀಡಿ. ಶಿಕ್ಷಣದಿಂದ ಮಾತ್ರ ವ್ಯಕ್ತಿತ್ವ, ವ್ಯಕ್ತಿಯ ವಿಕಸನ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮೈಸೂರು ವಿವಿ ಕುಲಸಚಿವೆ ಎಂ.ಕೆ.ಸವಿತಾ ಮಾತನಾಡಿ, ಕಾಲೇಜಿನ ಸಾಂಸ್ಕೃತಿಕ ವೇದಿಕೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿ ಸಹ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅದಕ್ಕಾಗಿ ಕಠಿಣ ಶ್ರಮ ಮತ್ತು ಬದ್ಧತೆ ಪ್ರದರ್ಶಿಸಬೇಕು. ರಘು ದೀಕ್ಷಿತ್ ಅವರು ಇದೇ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಬಳಸಿಕೊಂಡು ಹೆಸರಾಂತ ಸಂಗೀತಗಾರ, ನಿರ್ದೇಶಕ, ಸಂಯೋಜಕರಾಗಿದ್ದಾರೆ ಎಂದರು.
ಸಾಂಸ್ಕೃತಿಕ ವೇದಿಕೆ, ಎನ್‌ಸಿಸಿ, ಎನ್‌ಎಸ್‌ಎಸ್ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆ, ಬುದ್ಧಿ ಸಾಮರ್ಥ್ಯವನ್ನು ಹೊರತರಲು ನೆರವಾಗಲಿವೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಅವಶ್ಯ. ಜತೆಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಗುರಿಯನ್ನು ಸಹ ಇಟ್ಟುಕೊಂಡು ಸಾಗಬೇಕು. ವಿದ್ಯಾರ್ಥಿ ಜೀವನವನ್ನು ಸಾರ್ಥಕ್ಯ ಮಾಡಿಕೊಂಡಾಗ ಪಾಲಕರ ಆಸೆ ಈಡೇರಿದಂತಾಗಲಿದೆ ಎಂದರು.
ಬಳಿಕ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಪ್ರೊ.ಎಸ್.ಮಹದೇವಮೂರ್ತಿ, ಜ್ಞಾನವಾಹಿನಿ ಸಂಚಾಲಕ ಜಿ.ಕೃಷ್ಣಮೂರ್ತಿ, ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಎಂ.ವೆಂಕಟೇಶ್, ಪರೀಕ್ಷಾ ನಿಯಂತ್ರಣಾಧಿಕಾರಿ ಸಿ.ನಾಗೇಶ್ ಬಾಬು, ಆಡಳಿತಾಧಿಕಾರಿ ಪ್ರೊ.ಕೆ.ಅಜಯ್‌ಕುಮಾರ್ ಇನ್ನಿತರರಿದ್ದರು.