ರಾಗಿ ಮಾರಾಟದ ಹಣಕ್ಕೆ ಪಟ್ಟು

HSD PRATIBATANTE 10
Published on

ಹೊಸದುರ್ಗ: ಬೆಂಬಲ ಬೆಲೆಯಡಿ ರಾಗಿ ಮಾರಾಟ ಮಾಡಿದ ರೈತರಿಗೆ ಕೂಡಲೇ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ರೈತಸಂಘ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಆವರಣದಲ್ಲಿ ಧರಣಿ ನಡೆಸಿದ ರೈತಮುಖಂಡರು, ರೈತರು, ಸರ್ಕಾರ ಆರಂಭಿಸಿದ್ದ ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಿದ 600ಕ್ಕೂ ಹೆಚ್ಚು ಮಂದಿಗೆ ಕೇಂದ್ರದ ಅಧಿಕಾರಿಗಳು ಅಧಿಕೃತ ಗ್ರೈನ್ ಓಚರ್ ನೀಡದೆ ವಂಚನೆ ಮಾಡಿದ್ದಾರೆ ಎಂದು ದೂರಿದರು.

ವಂಚನೆ ಮಾಡಿದ ಅಧಿಕಾರಿಗಳ ವಿರುದ್ಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಬಿಟ್ಟರೆ ಇಲ್ಲಿಯವರೆಗೆ ಹಣ ಪಾವತಿಸಲು ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. ಅನ್ನದಾತರ ಹಣವನ್ನು ಅಧಿಕಾರಿಗಳು ಕೊಳ್ಳೆ ಹೊಡೆಯುತ್ತಿದ್ದರೂ ಜಿಲ್ಲಾ ಹಾಗೂ ತಾಲೂಕು ಆಡಳಿತ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಬದುಕಿಗೆ ಅಧಾರವಾಗಿದ್ದ ಹಣ ಸಿಗದೆ ಜೀವನಾವಶ್ಯಕ ವಸ್ತುಗಳ ಖರೀದಿ, ಮಕ್ಕಳ ವಿಧ್ಯಾಬ್ಯಾಸ, ಆರೋಗ್ಯ ಚಿಕಿತ್ಸೆಗೆ ಸಮಸ್ಯೆಯಾಗಿದೆ. ರಾಗಿ ಬಿತ್ತನೆಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಕೂಡ ಹಣವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೃಷಿಕರ ಸಂಕಷ್ಟ ಅಧಿಕಾರಿಗಳು ಕೇಳುತ್ತಿಲ್ಲ ಎಂದು ಹೇಳಿದರು.

ಅಧಿಕಾರಿಗಳ ವಿರುದ್ದ ನಡೆಯುತ್ತಿರುವ ತನಿಖೆಯ ನೆಪ ಹೇಳದೆ ಕೂಡಲೇ ಸರ್ಕಾರ ರೈತರಿಗೆ ಬಾಕಿ ಹಣವನ್ನು ಪಾವತಿಸಬೇಕು. ಅಲ್ಲಿಯವರೆಗೂ ಸ್ಥಳದಿಂದ ನಿರ್ಗಮಿಸುವುದಿಲ್ಲ. ಅರ್ನಿದಿಷ್ಟಾವದಿ ಮುಷ್ಕರ ನಡೆಸಲಾಗುವುದು ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಪಾಲಯ್ಯ ಮಾತನಾಡಿ, ಹಣ ಪಾವತಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಈ ಕುರಿತು ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗ ಕವಾಡಿಗರಹಟ್ಟಿಯ ಪ್ರಕರಣದಿಂದ ಸ್ವಲ್ಪ ತಡವಾಗಿದೆ. ದಯವಿಟ್ಟು ಪ್ರತಿಭಟನೆ ಹಿಂದಕ್ಕೆ ಪಡೆಯಿರಿ ಎಂದು ಮನವಿ ಮಾಡಿದರು. ಅವರ ಕೋರಿಕೆಗೆ ಸ್ಪಂದಿಸಿ ಮುಷ್ಕರ ಹಿಂಪಡೆದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ತಾಲೂಕಾಧ್ಯಕ್ಷ ಬೋರೇಶ್, ಕಾರ್ಯಾಧ್ಯಕ್ಷ ಕೊರಟಿಕೆರೆ ಮಹೇಶಪ್ಪ, ಮುಖಂಡರಾದ ರಘು, ಪ್ರಸನ್ನ, ಚಿತ್ತಯ್ಯ, ಮಂಜುಳಾ, ಸಾವಿತ್ರಮ್ಮ, ರಾಧಮ್ಮ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net