ರಕ್ಷಿತಾಬಾಯಿ ಪಾಲಕರಿಗೆ ಬೆಳ್ಳಿ ಬಳಗದಿಂದ ಮನೆ

25 pnh 01 web
Published on

ಪಂಚನಹಳ್ಳಿ: ಅಪಘಾತದಲ್ಲಿ ಮೃತಪಟ್ಟ ಮಗಳು ರಕ್ಷಿತಾಬಾಯಿ ಅಂಗಾಂಗಗಳನ್ನು ದಾನ ಮಾಡಿದ ಪಾಲಕರಾದ ಸೋಮನಹಳ್ಳಿ ತಾಂಡಾದ ಶೇಖರ್ ನಾಯ್ಕ ಮತ್ತು ಲಕ್ಷ್ಮೀಬಾಯಿ ಅವರನ್ನು ಶಾಸಕ ಬೆಳ್ಳಿಪ್ರಕಾಶ್ ಭಾನುವಾರ ಭೇಟಿ ಮಾಡಿ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ 2 ಲಕ್ಷ ರೂ. ನೀಡಿದ ಶಾಸಕ ಬೆಳ್ಳಿ ಪ್ರಕಾಶ್, ರಕ್ಷಿತಾಬಾಯಿ ಪಾಲಕರಿಗೆ ವಾಸಕ್ಕೆ ಬೆಳ್ಳಿ ಬಳಗದಿಂದ ಮನೆ ಕಟ್ಟಿಸಿಕೊಡಲಾಗುವುದು. ಇದಕ್ಕಾಗಿ ನಿವೇಶನ ಗುರುತಿಸುವಂತೆ ಸ್ಥಳೀಯ ಬಿಜೆಪಿ ಮುಖಂಡರಿಗೆ ಸೂಚಿಸಿದರು.

ಮಿದುಳು ನಿಷ್ಕ್ರಿಯಗೊಂಡಿದ್ದರೂ ಇತರ ಅಂಗಾಂಗಗಳು ಕ್ರಿಯಾಶೀಲವಾಗಿದ್ದರಿಂದ ದಾನ ಮಾಡುವ ಮೂಲಕ ಪಾಲಕರು ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಮಗಳ ಜೀವ ಹೋದರೂ 9 ಜನರಿಗೆ ಜೀವದಾನ ಮಾಡಿದ ಕೀರ್ತಿ ರಕ್ಷಿತಾಬಾಯಿ ಕುಟುಂಬಕ್ಕೆ ಸಲ್ಲುತ್ತದೆ. ಹಾಗಾಗಿ ಕುಟುಂಬದ ನೋವಿಗೆ ನಿರಂತರವಾಗಿ ಸ್ಪಂದಿಸುತ್ತೇನೆ. ರಕ್ಷಿತಾಬಾಯಿ ಸಹೋದರರ ಮುಂದಿನ ವಿದ್ಯಾಭ್ಯಾಸಕ್ಕೂ ಸಹಕಾರ ನೀಡಲಾಗುವುದು ಅಥವಾ ಜೀವನೋಪಾಯಕ್ಕೆ ಮಾರ್ಗವನ್ನು ಕಲ್ಪಿಸುವಂತೆ ಕೇಳಿದರೆ ಸೂಕ್ತ ವ್ಯವಸ್ಥೆ ಮಾಡಲಾಗುವುದು.

ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರು ಸೋಮನಹಳ್ಳಿ ತಾಂಡಾಕ್ಕೆ ಭೇಟಿ ನೀಡಲಿದ್ದು, ಸರ್ಕಾರದಿಂದ ಪರಿಹಾರದ ಚೆಕ್ ನೀಡಲಿದ್ದಾರೆ ಎಂದು ತಿಳಿಸಿದರು. ಕಡೂರಿನಲ್ಲಿ ನಿರ್ವಿುಸುತ್ತಿರುವ ಬಂಜಾರ ಸಮುದಾಯ ಭವನಕ್ಕೆ ರಕ್ಷಿತಾಬಾಯಿ ಹೆಸರನ್ನು ಇಡುವಂತೆ ಬಂಜಾರ ಸಮಾಜದ ಮುಖಂಡರಿಗೆ ಬೆಳ್ಳಿಪ್ರಕಾಶ್ ಸಲಹೆ ನೀಡಿದರು. ರಕ್ಷಿತಾಬಾಯಿ ಇಬ್ಬರು ಸಹೋದರರಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ ಕೊಡಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಡನೆ ರ್ಚಚಿಸಲಾಗುವುದು. ಅವಕಾಶವಿದ್ದರೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಆದರೆ ಸಾವಿನ ಮನೆಯಲ್ಲಿ ಸುಳ್ಳಿನ ಭರವಸೆ ನೀಡುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net