

ಚಿತ್ರದುರ್ಗ: ನಾಟ್ಯ ಪ್ರವೀಣೆ ಡಾ.ಜಿ.ಪಿ. ರಕ್ಷಿತಾ ಅವರ ಭರತನಾಟ್ಯ ರಂಗ ಪ್ರವೇಶವನ್ನು ಆ. 10ರಂದು ಉಮಾಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಂಜನಾ ನೃತ್ಯ ಕಲಾಕೇಂದ್ರದ ವಿದುಷಿ ಡಾ. ನಂದಿನಿ ಶಿವಪ್ರಕಾಶ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭರತನಾಟ್ಯ ಕಲೆಯಲ್ಲಿ ಹತ್ತದಿನೈದು ವರ್ಷ ಅಭ್ಯಾಸ ಮಾಡಿದ್ದು, ರಂಗ ಪ್ರವೇಶಕ್ಕಾಗಿ ಸತತ ಆರು ತಿಂಗಳು ತಾಲೀಮು ನಡೆಸಿದ್ದಾರೆ. ಈ ಮೂಲಕ ರಕ್ಷಿತಾ ತಮ್ಮ ಪ್ರತಿಭೆ ಅನಾವರಣಗೊಳಿಸಲಿದ್ದಾರೆ. ಮುಂದೆ ಉದಯೋನ್ಮುಖ ಕಲಾವಿದೆಯಾಗಲು ಇದು ಸಹಕಾರಿಯಾಗಲಿದೆ ಎಂದರು.
ಅಂದು ಸಂಜೆ 5ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಸಾನಿಧ್ಯವನ್ನು ಶಿವಲಿಂಗಾನಂದ ಸ್ವಾಮೀಜಿ ವಹಿಸುವರು. ಎಂಎಲ್ಸಿ ಕೆ.ಎಸ್. ನವೀನ್, ಕೂಚುಪಡಿ ನೃತ್ಯಗಾರ ಡಾ. ವಸಂತಕಿರಣ್, ವಿದ್ವಾನ್ ಜಿ.ಎಸ್. ನಾಗೇಶ್, ಮಾಜಿ ಶಾಸಕ ಎ.ವಿ. ಉಮಾಪತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಡಾ. ರಕ್ಷಿತಾ ಮಾತನಾಡಿ, ಎಂಟನೇ ವಯಸ್ಸಿನಿಂದಲೇ ಭರತನಾಟ್ಯ ಕಲಿಯಲು ಆರಂಭಿಸಿದ ನನಗೆ ಸುಧಾಮೂರ್ತಿ ಮೊದಲ ಗುರು. ನಂತರ ನಂದಿನಿ ಶಿವಪ್ರಕಾಶ್ ಅವರ ಬಳಿಯೂ ತರಬೇತಿ ಪಡೆದು ರಂಗ ಪ್ರವೇಶಿಸುತ್ತಿದ್ದೇನೆ. ನಾಟ್ಯ ಜೀವನದ ಪಾಠ ಹೇಳಿಕೊಟ್ಟಿದೆ ಎಂದು ತಿಳಿಸಿದರು.
ಗಂಗೂಬಾಯಿ ಹಾನಗಲ್ ಸಂಗೀತ ವಿವಿಯಿಂದ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಶಿಕ್ಷಣದ ಜೊತೆ ಭರತನಾಟ್ಯವನ್ನೂ ನಿಭಾಯಿಸಿದ್ದೇನೆ ಎಂದರು.
ವಿದ್ವಾನ್ ಸಿ.ಆರ್. ಶಿವಪ್ರಕಾಶ್, ಪಾಲಕರಾದ ಗೋನೂರು ಪ್ರಕಾಶ್‌ಮೂರ್ತಿ, ನಳಿನಾಕ್ಷಿ ಇದ್ದರು.