

ಚಾಮರಾಜನಗರ: ಭಾರತೀಯ ಪರಂಪರೆಯಲ್ಲಿ ರಕ್ಷಾ ಬಂಧನದಂತಹ ಹಬ್ಬಗಳು ಸಹೋದರತ್ವವನ್ನು ವೃದ್ಧಿಗೊಳಿಸಲು ಸಹಕಾರಿಯಾಗುತ್ತದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಕಾಗಲವಾಡಿ ಚಂದ್ರು ತಿಳಿಸಿದರು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶಭವನದಲ್ಲಿ ಭಾನುವಾರ ಆಯೋಜಿಸಿದ್ದ ರಕ್ಷಾ ಬಂಧನ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಸಂಧಿಗ್ದ ಪರಿಸ್ಥಿತಿಯಲ್ಲಿ, ಈಶ್ವರೀಯ ವಿಶ್ವ ವಿಶ್ವವಿದ್ಯಾಲಯವು ಮಾನವೀಯ ಮೌಲ್ಯಗಳ ಸೆಲೆಯನ್ನ ಬೆಸೆಯುತ್ತಿದೆ. ಇಂತಹ ಸ್ನೇಹ ಸೂಚಕ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸಹೋದರತೆ ಸಂಬಂಧದ ಮಹತ್ವವನ್ನು ಸಾರಿದೆ ಎಂದು ತಿಳಿಸಿದರು.
ಆಧ್ಯಾತ್ಮಿಕ ಚಿಂತಕ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಸಹೋದರತ್ವದ ಭಾವನೆಯನ್ನು ಮೂಡಿಸುವ ಭಾರತೀಯ ಸಂಸ್ಕೃತಿಯ ಹಬ್ಬಗಳ ಆಚರಣೆಗಳು ಬಹಳ ಅವಶ್ಯಕವಾಗಿದೆ. ಯುವತಲೆಮಾರುಗಳನ್ನು ಅದನ್ನು ಅಳವಡಿಸಿಕೊಂಡು, ಆಚರಿಸಿಕೊಂಡು ಮುನ್ನಡೆಯಬೇಕಿದೆ ಎಂದು ಸಲಹೆ ನೀಡಿದರು.
ಈಶ್ವರೀಯ ವಿಶ್ವ ವಿಶ್ವವಿದ್ಯಾಲದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀ ಜೀ ಮಾತನಾಡಿ, ಪ್ರಸ್ತುತ ಸಮಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಯಾವುದಾದರೂ ಒಂದು ರೀತಿಯ ಬಂಧನದಲ್ಲಿ ಸಿಲುಕಿರುತ್ತಾರೆ. ಜೀವನದಲ್ಲಿ ಆಗಾಗ ಅಸುರಕ್ಷತೆಯ ಅನುಭವ ಕೂಡ ಕಾಡುತ್ತಿರುತ್ತದೆ. ಇರುವ ಬಂಧನಗಳಿಂದ ಬಿಡುಗಡೆ ಹೊಂದಬೇಕು ಮತ್ತು ಅಸುರಕ್ಷತೆಯ ಭಾವನೆಗಳಿಂದ ದೂರವಾಗಲು ರಕ್ಷಾಬಂಧನದಂತಹ ಹಬ್ಬಗಳು ನೆರವಾಗುತ್ತದೆ ಎಂದರು.
ರೋಟರಿ ಸಿಲ್ಕ್ ಸಿಟಿ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷ ಮಾಣಿಕ್ ಚಂದ್ ಸಿರ್ವೀ, ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್, ಗಾಯಕ ಸುರೇಶ್ ಹರದನಹಳ್ಳಿ, ನಾಟಿ ವೈದ್ಯ ರಾಮಶೆಟ್ಟಿ, ನಾರಾಯಣಶೆಟ್ಟಿ, ಪುಟ್ಟಶೇಖರ ಮೂರ್ತಿ, ಸುಂದರ್, ಶ್ರೀನಿವಾಸ್, ನಾಗರಾಜ್, ಪ್ರಮೀಳಾ ಊದಗಡ್ಡಿ, ಓಂ ಶಾಂತಿ ಬಿ.ಕೆ.ಆರಾಧ್ಯ ಇತರರು ಹಾಜರಿದ್ದರು.