ರಕ್ಷಾ ಬಂಧನ ಸಹೋದರತೆಯ ಸಂಕೇತ

AUG. 30, HNP., PH.1.
Published on

ಹೊಳೆನರಸೀಪುರ: ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾ ಬಂಧನವು ಸ್ನೇಹ ಮತ್ತು ಸಹೋದರತೆಯ ಸಂಕೇತವಾಗಿದೆ ಎಂದು ಆರ್‌ಎಸ್‌ಎಸ್ ಶಾಖಾ ಪ್ರಮುಖ್ ಮಹೇಶ್ ಹೇಳಿದರು.
ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಆರ್‌ಎಸ್‌ಎಸ್ ( ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಶಾಖೆಯಲ್ಲಿ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಕ್ಷಾ ಬಂಧನವು ಒಂದು ಪವಿತ್ರ ಸಂಬಂಧಕ್ಕೆ ಸಾಕ್ಷಿಯಾಗುವುದರೊಂದಿಗೆ ರಾಷ್ಟ್ರಪ್ರೇಮದ ಸಂಕೇತವೂ ಆಗಿದೆ ಎಂದವರು ಹೇಳಿದರು.
ಸಹೋದರಿಯು ತನ್ನ ಸಹೋದರನಿಗೆ ತಿಲಕವನ್ನಿಟ್ಟು, ಆರತಿ ಬೆಳಗಿ ಸಮೃದ್ಧಿ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರೆ, ಸಹೋದರನು ತನ್ನ ಸಹೋದರಿಯನ್ನು ರಕ್ಷಿಸುವ ಭರವಸೆ ನೀಡುತ್ತಾನೆ. ಇಂತಹ ಮಹತ್ವದ ಹಾಗೂ ಪವಿತ್ರವಾದ ಸಾರವನ್ನು ಒಳಗೊಂಡ ರಕ್ಷಾ ಬಂಧನವನ್ನು ಎಲ್ಲರೂ ಸಂಭ್ರವಿಸೋಣ ಎಂದರು. ಸಂಘದ ಬೌದ್ಧಿಕ್ ಪ್ರಮುಖ್ ನಾಗೇಂದ್ರ ಮಾತನಾಡಿ, ಮಹಾಭಾರತದಲ್ಲಿ ಶ್ರೀ ಕೃಷ್ಣದ್ರೌಪದಿಯನ್ನು ಸಹೋದರಿಯಾಗಿ ಸ್ವೀಕರಿಸಿ ಶಾಶ್ವತವಾಗಿ ಆಕೆಯನ್ನು ರಕ್ಷಿಸುವ ಭರವಸೆಯನ್ನು ನೀಡಿದ್ದ. ಅದರಂತೆ ಆತ ನಡೆದುಕೊಂಡ. ಇದು ನಮಗೆ ಮಾದರಿ ಎಂದರು.
ಹಿಂದು ಸಂಸ್ಕೃತಿಯಲ್ಲಿ ರಾಖಿ ಒಡಹುಟ್ಟಿದವರ ನಡುವಿನ ಬಾಂಧವ್ಯದ ಮಹತ್ವವನ್ನು ಒತ್ತಿ ಹೇಳುತ್ತದೆ. ಇದನ್ನು ಯುವಜನರು ಅರ್ಥಮಾಡಿಕೊಳ್ಳಬೇಕು ಎಂದರು. ಪೂರ್ವಿಕರ ಆಚರಣೆಗಳನ್ನು ಪಾಲನೆ ಮಾಡಿ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳಸುವ ಕಾರ್ಯದಲ್ಲಿ ಎಲ್ಲರೂ ಒಂದಾಗಬೇಕು ಎಂದರು.
ನಿವೃತ್ತ ಯೋಧ ವಸಂತ ಕುಮಾರ, ಮುಖಂಡರಾದ ಮುತ್ತುರಾಜ್, ದಯಾನಂದ, ಆದಿ ಚಂದನ್, ವೈಭವ, ಬಾಲಾಜಿ, ಮಿಥುನ್ ಮತ್ತು ಸಂಘದ ಸ್ವಯಂಸೇವಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net