

ಹುಬ್ಬಳ್ಳಿ: ಕರೊನಾ ಬಂದ ನಂತರ ಎಲ್ಲರ ಜೀವನಶೈಲಿ ಬದಲಾವಣೆಯಾಗಿದೆ. ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರಿಗೂ ತೊಂದರೆ ಉಂಟಾಗಿದೆ. ಹಾಗಾಗಿ, ಕರೊನಾ ಬಗ್ಗೆ ಭಯ ಪಡದೇ, ಜಾಗೃತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಅಬ್ಸಲಾನ್ ಇಂಜಿನಿಯರಿಂಗ್ ಹಾಗೂ ಗದಗನ ಸಂಕನೂರ ಆಸ್ಪತ್ರೆ ಸಹಯೋಗದಲ್ಲಿ ತಯಾರಿಸಲಾದ ‘ಪ್ಯೂರಿ ಪ್ಲೊ ವಿ1.0’ ಏರ್ ಪ್ಯೂರಿಫೈಯಿಂಗ್ ರೆಸ್ಪಿರೇಟರ್ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದ ಶೆಟ್ಟರ್, ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ವೈರಸ್ನಿಂದ ರಕ್ಷಿಸಿಕೊಳ್ಳಲು ಯುವಕರ ತಂಡ ತಯಾರಿಸಿರುವ ರಕ್ಷಾ ಕವಚ ಸದ್ಬಳಕೆಯಾಗಲಿ ಎಂದರು. ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಉತ್ತರ ಕರ್ನಾಟಕದ ಯುವಕರು ಜತೆಯಾಗಿ ಕರೊನಾ ಸೇನಾನಿಗಳಿಗೆ ಸಹಕಾರಿ ಯಾಗಲೆಂದು ಸಂಶೋಧಿಸಿರುವ ವೈರಸ್ ರಕ್ಷಾ ಕವಚ ಶೇ.99.99ರಷ್ಟು ಯಶಸ್ವಿ ಉತ್ಪನ್ನವಾಗಿದೆ. ಈ ಉತ್ಪನ್ನ ಹೆಚ್ಚು ಜನರಿಗೆ ಉಪಯೋಗವಾಗುವಂತೆ ಮಾರುಕಟ್ಟೆಗೆ ಬಿಡುಗಡೆ ಮಾಡಿ ಎಂದು ಸಲಹೆ ನೀಡಿದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಡಾ.ಪ್ರಕಾಶ ಸಂಕನೂರ, ಪ್ರಸಾದ ಪಾಟೀಲ, ಸಚಿನ ಟೆಂಗಿನಕಾಯಿ, ಮತ್ತಿತರರು ಉಪಸ್ಥಿತರಿದ್ದರು.
ರಕ್ಷಾ ಕವಚದ ವಿಶೇಷತೆ
‘ಪ್ಯೂರಿ ಫ್ಲೊ’ ರಕ್ಷಾ ಕವಚವನ್ನು ವಿಶೇಷವಾಗಿ ಕರೊನಾ ಸೇನಾನಿಗಳಾದ ವೈದ್ಯರಿಗಾಗಿ ತಯಾರಿಸಲಾಗಿದೆ. ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೇಳೆ ಇದನ್ನು ಧರಿಸಬಹುದಾಗಿದೆ. ಈ ಯಂತ್ರ ಬಳಸುವುದರಿಂದ ಯಾವುದೇ ರೀತಿಯ ವೈರಸ್ ಇದ್ದರೂ ಫಿಲ್ಟರ್ ಆಗಿ ಸ್ವಚ್ಛ ಗಾಳಿ ಒದಗಿಸುತ್ತದೆ. ಏರ್ ಫಿಲ್ಟರ್ ಮೂಲಕ ಗಾಳಿಯನ್ನು ಫಿಲ್ಟರ್ ಮಾಡಿ ರವಾನಿಸುತ್ತದೆ. ಮಾಸ್ಕ್ ಬಳಸುವುದರಿಂದ ಆಗುವ ಉಸಿರಾಟದ ಸಮಸ್ಯೆ ಇಲ್ಲಿ ಇರುವುದಿಲ್ಲ. ಈ ಯಂತ್ರಕ್ಕೆ ಎರಡು ಬ್ಯಾಟರಿಗಳಿದ್ದು, ಒಂದು ಬ್ಯಾಟರಿ 7 ಗಂಟೆ ಕೆಲಸ ಮಾಡುತ್ತದೆ. ಇದರ ಬೆಲೆ 48,500 ರೂ. ಎನ್ನುತ್ತಾರೆ ಡಾ. ಪ್ರಕಾಶ ಸಂಕನೂರ.