ರಕ್ಷಣೆಗಾಗಿ ವಿದ್ಯಾರ್ಥಿಗಳು ಕರಾಟೆ ಅಭ್ಯಾಸ ಮಾಡಿ

7
Published on

ಮೈಸೂರು; ಸ್ವಯಂ ರಕ್ಷಣಾ ಕಲೆಯಾದ ಕರಾಟೆಯನ್ನು ವಿದ್ಯಾರ್ಥಿಗಳು ನಿರಂತರವಾಗಿ ಅಭ್ಯಾಸ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹೇಳಿದರು.

ಮೈಸೂರು ಕರಾಟೆ ಅಸೋಸಿಯೇಷನ್ ವತಿಯಿಂದ ನಗರದ ಮೈಸೂರು ವಿಶ್ವವಿದ್ಯಾಲಯದ ಹಾಕಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಕರಾಟೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರಾಟೆಯಿಂದ ದೈಹಿಕ, ಮಾನಸಿಕ ಸದೃಢತೆ ದೊರೆಯಲಿದೆ. ಸತತ ಅಭ್ಯಾಸದಿಂದ ಸಾಧನೆಯನ್ನೂ ಮಾಡಬಹುದು ಎಂದರು.

ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಮತ್ತು ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಳ್ಳಲು ಕರಾಟೆ ಕಲಿಕೆ ಪೂರಕವಾಗಿದೆ. ಇದು ಸೇರಿದಂತೆ ಯಾವುದೇ ದೈಹಿಕ ಕಸರತ್ತಿನ ವ್ಯಾಯಾಮದಿಂದ ಇಡೀ ದಿನ ಉಲ್ಲಾಸ, ಲವಲವಿಕೆ ಇರಬಹುದು. ಆದ್ದರಿಂದ ಪ್ರತಿ ವಿದ್ಯಾರ್ಥಿಯೂ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಕರಾಟೆಪಟು ನಾಗಭರಣ ಅವರು ತಮ್ಮ ತಂಡದ ಸದಸ್ಯರ ತಲೆ ಮೇಲೆ ಬಾಟಲ್ ಇರಿಸಿ, ಅದರ ಮೇಲೆ ತೆಂಗಿನಕಾಯಿ ಇಟ್ಟು ಲೀಲಾಜಾಲವಾಗಿ ಒಡೆದು ಹಾಕುವ ಮೂಲಕ ಗಮನ ಸೆಳೆದರು. ಕರಾಟೆಪಟುಗಳಾದ ಪ್ರದೀಪ್, ಶಂಕರ್, ಮಹದೇವಸ್ವಾಮಿ, ಶಿವದಾಸ್, ಚಿದಾನಂದ ಒಳಗೊಂಡ ತಂಡಗಳು ವಿವಿಧ ಕಸರತ್ತು ಪ್ರದರ್ಶಿಸಿದವು.

ವಿವಿಧ ಕರಾಟೆ ಶಾಲೆಗಳ ನೂರಾರು ಮಕ್ಕಳು ಕರಾಟೆ ಕಲೆಯನ್ನು ಸಾಮೂಹಿಕವಾಗಿ ಪ್ರದರ್ಶಿಸಿದರು. ಶೈಕ್ಷಣಿಕವಾಗಿಯೂ ಉತ್ತಮ ಅಂಕ ಪಡೆದ ಕರಾಟೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್, ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಸೋಸಲೆ ಎಂ.ಸಿದ್ದರಾಜು, ಕಾರ್ಯದರ್ಶಿ ಎಸ್.ದೀಪಕ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net