

ನಂಜನಗೂಡು: ಪುರುಷರಿಗಿಂತ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, ಭಾರತವನ್ನು ಅನಿಮಿಯಾಮುಕ್ತಗೊಳಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಮದರ್‌ಹುಡ್ ಆಸ್ಪತ್ರೆಯ ಮುಖ್ಯಸ್ಥೆ ಡಾ.ಸೋನಿಯಾ ಮಂದಪ್ಪ ಹೇಳಿದರು.
ತಾಲೂಕಿನ ಇಮ್ಮಾವು ಗ್ರಾಮದಲ್ಲಿ ಶನಿವಾರ ಮಮ ಮಿಲ್ಸ್ ಸೇವಾ ಸಂಸ್ಥೆ ಮತ್ತು ಮೈಸೂರಿನ ಮದರ್‌ಹುಡ್ ಆಸ್ಪತ್ರೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಉಚಿತ ತಪಾಸಣಾ ಬೃಹತ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. 100 ರಲ್ಲಿ 20 ಮಹಿಳೆಯರಿಗೆ ರಕ್ತಹೀನತೆ ಸಮಸ್ಯೆ ಕಾಡುತ್ತಿದೆ. ಇದರಿಂದ ಗರ್ಭಿಣಿ ಹಂತದಲ್ಲಿ ಅಥವಾ ಹೆರಿಗೆ ನಂತರ 20 ತಾಯಂದಿರ ಮರಣ ಪ್ರಕರಣಗಳು ಕಂಡುಬರುತ್ತಿವೆ. ತಾಯಿ ಮರಣ ಪ್ರಮಾಣ ತಪ್ಪಿಸಲು ಸರ್ಕಾರ 2011ರಿಂದಲೇ ಅನಿಮಿಯಾಮುಕ್ತ ಭಾರತ ಸಂಕಲ್ಪಕ್ಕೆ ಮುಂದಾಗಿದ್ದು, ಮಹಿಳೆ ಮತ್ತು ಪುರುಷರನ್ನು ಕಡ್ಡಾಯವಾಗಿ ರಕ್ತದ ಮಟ್ಟದ ಪರೀಕ್ಷೆಗೆ ಒಳಪಡಿಸಿ ರಕ್ತಹೀನತೆ ಸಮಸ್ಯೆ ಕಂಡು ಬಂದಲ್ಲಿ ಉಚಿತವಾಗಿ ಪೌಷ್ಟಿಕಾಂಶದ ಮಾತ್ರೆಗಳನ್ನು ನೀಡುವುದನ್ನು ಕಡ್ಡಾಯಗೊಳಿಸಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹೆಚ್ಚಿನ ರಾಸಾಯನಿಕ ಬಳಕೆ ಮತ್ತು ಆಹಾರ ಪದ್ಧತಿಯಿಂದಾಗಿ ಪೌಷ್ಟಿಕಾಂಶದಿಂದ ದೂರವಾಗಿ ಚರ್ಮದ ಸಮಸ್ಯೆ, ಮೂಳೆ, ನರ ದೌರ್ಬಲ್ಯದಂತಹ ಅನಾರೋಗ್ಯ ವಾತಾವರಣದಲ್ಲಿ ಬದುಕುವಂತಾಗಿದೆ. ನಮ್ಮ ಮುಂದಿನ ಪೀಳಿಗೆಯ ಮಕ್ಕಳ ಸ್ಥಿರ ಆರೋಗ್ಯಕ್ಕಾಗಿ, ಆರೋಗ್ಯಕರ ಸಮಾಜ ನಿರ್ಮಾಣದ ಹಿತದೃಷ್ಟಿಯಿಂದ ಗರ್ಭಿಣಿ, ಬಾಣಂತಿಯರಿಗೆ 9 ತಿಂಗಳು ಪೌಷ್ಟಿಕಯುಕ್ತ ಆಹಾರ, ಚಿಕಿತ್ಸೆ ನೀಡಿ ಉತ್ತಮ ಪೋಷಣೆ ಮಾಡಿ ಆರೈಕೆ ಮಾಡಬೇಕು. ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯರೊಂದಿಗೆ ಸಹಕಾರ ನೀಡಬೇಕು ಎಂದರು.
ಮಮ ಮಿಲ್ಸ್ ಸಂಸ್ಥಾಪಕಿ ಅನಿತಾ ಸದಾನಂದ ಮಾತನಾಡಿ, ಗ್ರಾಮೀಣ ಭಾಗದ ಪುರುಷ ಮತ್ತು ಮಹಿಳೆಯರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಸಂಕಲ್ಪದೊಂದಿಗೆ ಮಮ ಮಿಲ್ಸ್ ಮೈಸೂರು ಭಾಗದ ಎಲ್ಲೆಡೆ ಆರೋಗ್ಯ ಉಚಿತ ತಪಾಸಣೆ ಶಿಬಿರಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಮದರ್‌ಹುಡ್ ಆಸ್ಪತ್ರೆಯ ನೆರವಿನೊಂದಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿಸಿದರು.
ಹುಳಿಮಾವು ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ ನಾಗರಾಜು, ಉಪಾಧ್ಯಕ್ಷ ರಮೇಶ್, ವೈದ್ಯಕೀಯ ಸಿಬ್ಬಂದಿ ರಮ್ಯಾ, ರವಿ, ಗೋಪಿ, ಮುಖಂಡರಾದ ವೆಂಕಟೇಗೌಡ, ಪಿಡಿಒ ಮಹದೇವಸ್ವಾಮಿ, ಮದನ್, ಮಂಜು ಉಪಸ್ಥಿತರಿದ್ದರು.