ರಕ್ತದಾನಿಗಳ ಮಾಹಿತಿ ಸಂಗ್ರಹಿಸಿ; ತುರ್ತು ಸಂದರ್ಭದಲ್ಲಿ ನೆರವಾಗುತ್ತದೆ: ಹರತಾಳು ಹಾಲಪ್ಪ

WEB SGR !!!@$$
Published on

ಸಾಗರ: ರಕ್ತದಾನದ ಜತೆಗೆ ರಕ್ತದಾನಿಗಳ ಮಾಹಿತಿ ಸಂಗ್ರಹಿಸಿ. ತುರ್ತು ಸಂದರ್ಭದಲ್ಲಿ ರಕ್ತದ ಅಗತ್ಯ ಇದ್ದವರಿಗೆ ರಕ್ತದಾನ ಮಾಡಲು ಸಹಕಾರಿ ಆಗುತ್ತದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ಉಪವಿಭಾಗೀಯ ಆಸ್ಪತ್ರೆ ಆವರಣದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿ ಮಾತನಾಡಿದರು.

ರಕ್ತದಾನ ಶಿಬಿರ ಹೆಚ್ಚೆಚ್ಚು ನಡೆಯಬೇಕು. ಇದರ ಜತೆಗೆ ಕೆಲವು ಗುಂಪಿನ ರಕ್ತಗಳು ತುರ್ತು ಸಂದರ್ಭದಲ್ಲಿ ಸಿಗುವುದಿಲ್ಲ. ಅಂತಹ ರಕ್ತದ ಗುಂಪು ಹೊಂದಿರುವವರ ಮಾಹಿತಿಯನ್ನು ಯುವ ಮೋರ್ಚಾ ಸಂಗ್ರಹಿಸಿಟ್ಟುಕೊಳ್ಳಬೇಕು. ಅಗತ್ಯ ಸಂದರ್ಭದಲ್ಲಿ ಅವರನ್ನು ಸಂಪರ್ಕ ಮಾಡಿ ರಕ್ತದಾನ ಮಾಡಿಸುವ ಮೂಲಕ ಅವರ ಜೀವ ಉಳಿಸುವ ಸಾರ್ಥಕ ಕೆಲಸ ಮಾಡಬೇಕು. ರಕ್ತ ಇಲ್ಲ ಎನ್ನುವ ಕಾರಣಕ್ಕೆ ಯಾವುದೇ ವ್ಯಕ್ತಿಯ ಸಾವು ಸಂಭವಿಸಬಾರದು. ಈ ನಿಟ್ಟಿನಲ್ಲಿ ರಕ್ತದಾನ ಅತ್ಯಂತ ಶ್ರೇಷ್ಟ ಸಾಮಾಜಿಕ ಕಾರ್ಯ ಎಂದು ಗುರುತಿಸಿಕೊಂಡಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವ ಮೋರ್ಚಾ ನಗರ ಅಧ್ಯಕ್ಷ ಶ್ರೀರಾಮ್, ರಕ್ತದಾನ ಅತ್ಯಂತ ಶ್ರೇಷ್ಠ ದಾನವಾಗಿದೆ. ಪ್ರಧಾನಿ ಜನ್ಮದಿನದ ಅಂಗವಾಗಿ ರಕ್ತದಾನದಂತಹ ಶ್ರೇಷ್ಠ ಕೆಲಸ ಮಾಡುತ್ತಿರುವುದು ಹೆಮ್ಮೆ. ಸೇವಾ ಪಾಕ್ಷಿಕ ಕಾರ್ಯಕ್ರಮದ ಯಶಸ್ಸಿಗೆ ಯುವ ಮೋರ್ಚಾ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net