

ಬೆಳಗಾವಿ: ರಕ್ತ ಸಂಗ್ರಹಣೆಯನ್ನು ಸಾಮಾನ್ಯ ರೂಢಿಯಂತೆ ಅಥವಾ ಸ್ವಯಂಚಾಲಿತ ರಕ್ತಸಂಗ್ರಹಣ ಯಂತ್ರದಿಂದಲೂ ರಕ್ತದ ನಿಗದಿತ ಭಾಗಗಳನ್ನು ಮಾತ್ರ ಸಂಗ್ರಹಿಸಬಹುದು ಎಂದು ಬೆಳಗಾವಿ ಔಷಧ ನಿಯಂತ್ರಣಾ ಉಪನಿರ್ದೇಶಕ ರಘುರಾಮ ಎನ್.ವಿ. ಹೇಳಿದರು.
ನಗರದ ಕೆಎಲ್‌ಇ ಆಸ್ಪತ್ರೆಯಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ರಕ್ತ ಭಂಡಾರ ವಿವಿಧ ಪ್ರದೇಶಗಳಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು, ರಕ್ತದ ಪ್ರಮಾಣ ಹಾಗೂ ವಿಧಾನಗಳು ಬದಲಾವಣೆಗಳಾಗಬಹುದು. ಅದರೆ ಒಬ್ಬ ವ್ಯಕ್ತಿ 350 ಮಿ.ಲೀ.ಗಳಷ್ಟು ಸಂಪೂರ್ಣ ರಕ್ತವನ್ನು ನೀಡಬಹುದು ಎಂದರು.
ರಕ್ತದಾನಿಗಳು ತಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ರಕ್ತ ವರ್ಗಾವಣೆ ಅಗತ್ಯ ಇದ್ದಾಗ ಮಾತ್ರ ರಕ್ತದಾನ ಮಾಡುತ್ತಾರೆ. ಬಹುತೇಕರು ದಾನವಾಗಿ ನೀಡುತ್ತಾರೆ. ಆದ್ದರಿಂದ ರಕ್ತದಾನವನ್ನು ಒಂದು ಸಾಮಾಜಿಕ ಸೇವೆ ಎಂದು ತಿಳಿಯಬೇಕು. ಓರ್ವ ವ್ಯಕ್ತಿ ನೀಡುವ ರಕ್ತ ನಾಲ್ವರಿಗೆ ಸದುಪಯೋಗವಾಗುತ್ತದೆ. ಅದರಲ್ಲಿಯೂ ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅವಶ್ಯಕತೆ ಇರುತ್ತದೆ ಎಂದು ತಿಳಿಸಿದರು.
ಆರ್‌ಎಲ್ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಬೈಲಹೊಂಗಲದ ಕೆಆರ್‌ಸಿಎಸ್ ಮಹಾವಿದ್ಯಾಲಯದ 100 ವಿದ್ಯಾರ್ಥಿಗಳು ಹಾಗೂ ನಾಗರಿಕರು, ಜೆಎನ್‌ಎಂಸಿ 100 ವಿದ್ಯಾರ್ಥಿಗಳು ಸೇರಿ ಒಟ್ಟು 310ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು.
ರಕ್ತ ಭಂಡಾರದ ಮುಖ್ಯಸ್ಥ ಎಸ್.ವಿ. ವೀರಗಿ, ಡಾ. ಅವಿನಾಶ ಕವಿ, ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಸುನೀಲ ಜಲಾಲಪೂರೆ, ಡಾ. ಸೌಮ್ಯ ಮಾಸ್ತೆ, ಡಾ. ಎಂ ಎಸ್ ಗಣಾಚಾರಿ, ಹರ್ಷವರ್ಧನ ಇಂಚಲ ಇತರರಿದ್ದರು.