

ಅಥಣಿ: ಆರೋಗ್ಯವಂತ ವ್ಯಕ್ತಿಗಳು ಮಾಡುವ ರಕ್ತದಾನದಿಂದ ಅಮೂಲ್ಯ ಜೀವಗಳು ಬದುಕುಳಿಯುತ್ತವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಡಾ.ಆರ್.ಎಚ್.ಕುಲಕರ್ಣಿ ಸಭಾಂಗಣದಲ್ಲಿ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಸಂಘ, ಹೋಟೆಲ್ ಒಡೆಯರ ಸಂಘ ಹಾಗೂ ಕರ್ನಾಟಕ ಕರಾವಳಿ ಅರ್ಬನ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನದಿಂದ ಇನ್ನೊಬ್ಬರಿಗೆ ಜೀವದಾನ ನೀಡಿದಂತಾಗುತ್ತದೆ ಎಂದರು. ವೈದ್ಯ ಡಾ.ಸಿ.ಎ.ಸಂಕ್ರಟ್ಟಿ ಮಾತನಾಡಿ, ಪುರುಷರು 3 ತಿಂಗಳಿಗೊಮ್ಮೆ ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು. ಹೋಟೆಲ್ ಒಡೆಯರ ಸಂಘದ ಅಧ್ಯಕ್ಷ ಉಮೇಶರಾವ ಬಂಟೋಡ್ಕರ ಹಾಗೂ
ಡಾ.ರಾಮ ಕುಲಕರ್ಣಿ ಮಾತನಾಡಿ, ರಕ್ತದಾನ ಶಿಬಿರದಿಂದ ನೂರಾರು ಜನರಿಗೆ ಉಪಯೋಗವಾಗಿದೆ ಎಂದರು. 150ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ತಹಸೀಲ್ದಾರ್ ಬಿ.ಎಸ್.ಖಡಕಬಾವಿ, ಡಿವೈಎಸ್‌ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಅಕಾರಿಗಳಾದ ವಿ.ಎ.ವಾಲಿ, ಅಶೋಕ ಗುಡಿಮನಿ, ಗುರುರಾಜ ಭಟ್, ರಾಜೇಂದ್ರ ಮೈಲಾರ, ಮುರುಗೇಶ ಬಾಣಿ, ಸಂಜೀವ ಟೆಂಗಿನಕಾಯಿ ಇತರರಿದ್ದರು.