ರಕ್ತದಾನಕ್ಕೆ ಯುವ ಜನತೆ ಮುಂದಾಗಲಿ:ಹಿಮ್ಸ್ ನಿರ್ದೇಶಕ ಡಾ. ಬಿ. ರಾಜಣ್ಣ ಕರೆ

ರಕ್ತದಾನಕ್ಕೆ ಯುವ ಜನತೆ ಮುಂದಾಗಲಿ:ಹಿಮ್ಸ್ ನಿರ್ದೇಶಕ ಡಾ. ಬಿ. ರಾಜಣ್ಣ ಕರೆ
Published on

ಹಾಸನ: ರಕ್ತದಾನದಂತಹ ಸಮಾಜಮುಖಿ ಕೆಲಸದಲ್ಲಿ ಆಸಕ್ತಿ ವಹಿಸಿ ಯುವಜನತೆ ರಕ್ತದಾನ ಮಾಡಬೇಕು ಮತ್ತು ಯುವ ವಿದ್ಯಾರ್ಥಿಗಳು ಇಂತಹ ಸೇವಾ ಕಾರ್ಯಗಳನ್ನು ಮಾಡಲು ಮುಂದೆ ಬರಬೇಕು ಎಂದು ಹಿಮ್ಸ್ ನಿರ್ದೇಶಕರಾದ ಡಾ. ಬಿ. ರಾಜಣ್ಣ ಅವರು ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಯುವ ರೆಡ್ ಕ್ರಾಸ್ ಘಟಕ ಸರ್ಕಾರಿ ಕಾನೂನು ಕಾಲೇಜು ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಡೆಂೆ ಕಾಯಿಲೆಯಿಂದ ಪ್ಲೆಟಿಲೆಟ್ಸ್ ಕೊರತೆ ಹೆಚ್ಚಾಗಿದ್ದು ನೀವು ನೀಡುವ ಒಂದು ಯುನಿಟ್ ರಕ್ತದಿಂದ ಹಲವು ಜೀವಗಳನ್ನು ಉಳಿಸಬಹುದು. ಹಾಗಾಗಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಹುರಿದುಂಬಿಸಿದರು.
ಹಾಸನ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಮ್ಮಿಗೆ ಮೋಹನ್ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಬದ್ಧತೆ, ಸಮಾಜ ಸೇವೆ ಇಂತಹ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನೀವು ನೀಡುವ ಒಂದೊಂದು ಹನಿ ರಕ್ತವೂ ಮತ್ತೊಬ್ಬರ ಜೀವ ಉಳಿಸಲು ನೆರವಾಗುತ್ತದೆ. ಮತ್ತು ರಕ್ತ ನೀಡುವುದರಿಂದ ನಾವುಗಳು ಸಹ ಆರೋಗ್ಯದಿಂದ ಇರಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಶೀನಾ ಥಾಮಸ್, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶಬ್ಬೀರ್ ಅಹಮದ್, ಖಜಾಂಜಿ ಜಯೇಂದ್ರ ಕುಮಾರ್, ನಿರ್ದೇಶಕರಾದ ಬಿ.ಆರ್.ಉದಯ ಕುಮಾರ್, ಎಂ.ವಿ. ಗಿರೀಶ್, ಎಲ್.ಎಸ್. ನಿರ್ಮಲಾ, ಕೆ.ಟಿ. ಜಯಶ್ರೀ, ಜಯಪ್ರಕಾಶ್, ಸಂಚಾಲಕ ಎಚ್.ಆರ್. ಹರ್ಷಿತ್, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಎಸ್.ಎನ್. ಮಹದೇವಪ್ಪ ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net