ರಕ್ತದಾನಕ್ಕೆ ಮುಂದಾದ ವೈದ್ಯರು

8 vikram 3
Published on

ಧಾರವಾಡ: ಈಗಾಗಲೇ ಕರೊನಾ ವೈರಸ್ ತಡೆಯಲು ಜಿಲ್ಲಾ ಆಸ್ಪತ್ರೆ ವೈದ್ಯರು ನಿರಂತರ ಪ್ರಯತ್ನ ನಡೆಸಿದ್ದಾರೆ. ಇದರ ಮಧ್ಯೆಯೂ ಆಸ್ಪತ್ರೆಯಲ್ಲಿನ ರಕ್ತದ ಕೊರತೆ ನೀಗಿಸಲು ಆಸ್ಪತ್ರೆ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು, ಇತರ ವೈದ್ಯರಿಗೂ ಮಾದರಿಯಾಗಿದ್ದಾರೆ.

ಆಸ್ಪತ್ರೆ ರಕ್ತ ಭಂಡಾರದಿಂದ ಪ್ರತಿ ತಿಂಗಳು ಜಿಲ್ಲೆಯ ವಿವಿಧ ಕಡೆಗಳಲ್ಲಿ ರಕ್ತದಾನ ಶಿಬಿರ ನಡೆಸುವ ಮೂಲಕ ಸುಮಾರು 200 ಯುನಿಟ್ ರಕ್ತ ಸಂಗ್ರಹ ಮಾಡುತ್ತಿದ್ದರು. ಆದರೆ, ಲಾಕ್​ಡೌನ್ ಕಾರಣಕ್ಕೆ ಶಿಬಿರಗಳು ನಡೆಯುತ್ತಿಲ್ಲ. ಜಿಲ್ಲಾ ಆಸ್ಪತ್ರೆ ಮಾತ್ರವಲ್ಲ, ಎಲ್ಲ ರಕ್ತ ಭಂಡಾರಗಳಲ್ಲಿ ರಕ್ತದ ಕೊರತೆ ಎದುರಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ತಲಸ್ಸೇಮಿಯಾದಿಂದ ಬಳಲುತ್ತಿರುವ ಅನೇಕರಿಗೆ ಪ್ರತಿ ತಿಂಗಳೂ ರಕ್ತ ಹಾಕಲಾಗುತ್ತಿದೆ. ಇದೀಗ ರಕ್ತ ಇಲ್ಲದೆ ಸಮಸ್ಯೆ ಉಂಟಾಗುತ್ತಿದೆ. ಹೆರಿಗೆ ಪ್ರಕರಣದಲ್ಲಿ ರಕ್ತದ ಅವಶ್ಯಕತೆ ಇದೆ. ಈ ಎಲ್ಲ ಅಂಶಗಳನ್ನು ಮನಗಂಡ ವೈದ್ಯರು ಸ್ವತಃ ರಕ್ತದಾನಕ್ಕೆ ಮುಂದಾಗಿದ್ದಾರಲ್ಲದೆ, ತಮ್ಮ ಕುಟುಂಬದವರಿಗೂ ರಕ್ತದಾನಕ್ಕೆ ಪ್ರೇರೇಪಣೆ ನೀಡುತ್ತಿದ್ದಾರೆ.

ಕಳೆದ 2 ದಿನಗಳಿಂದ ಆಸ್ಪತ್ರೆಯ ವೈದ್ಯರು, ಸ್ಟಾಫ್ ನರ್ಸ್, ದಾದಿಯರು, ಸಿಬ್ಬಂದಿ ರಕ್ತದಾನ ಮಾಡುತ್ತಿದ್ದು, 35 ಯುನಿಟ್ ರಕ್ತ ಸಂಗ್ರಹವಾಗಿದೆ. ಸಿಬ್ಬಂದಿಯ ಈ ಮಹತ್ವದ ಕಾರ್ಯಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಕುಮಾರ ಮಾನಕರ ಪ್ರಮಾಣಪತ್ರ ನೀಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ವೈದ್ಯರ ಈ ಸೇವೆ ಗಮನಿಸಿದ ಕೆಲ ಸಾರ್ವಜನಿಕರೂ ರಕ್ತದಾನಕ್ಕೆ ಮುಂದಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net