

ಹರಪನಹಳ್ಳಿ: ತಾಲೂಕಿನ 567 ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಗಣೇಶೋತ್ಸವ ಸಮಿತಿಗಳು ವಿವಿಧ ಸಾಂಸ್ಕೃತಿಕ, ಸಾಮಾಜಿಕ , ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿವೆ.
ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ವಿಎಚ್‌ಪಿ ಹಾಗೂ ಬಜರಂಗದಳದಿಂದ 12 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಮುಖ್ಯ ಅಂಚೆ ಕಚೇರಿ ಬಳಿ ಈಶ್ವರ ವಿನಾಯಕ ಸಮಿತಿಯಿಂದ 14 ಅಡಿ ಎತ್ತರದ ಗಣೇಶ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.
ಮೇಗಳಪೇಟೆಯ ಕೆಂಪೇಶ್ವರ ದೇವಸ್ಥಾನದ ಆವರಣದಲ್ಲಿ ಕೆಂಪೇಶ್ವರ ಯುವಕ ಸಮಿತಿಯಿಂದ ಯಡಿಯೂರು ಸಿದ್ದಲಿಂಗೇಶ್ವರ ಕಥಾ ಪ್ರದರ್ಶನ ಏರ್ಪಡಿಸಲಾಗಿದೆ. ಗೋಕರ್ಣೇಶ್ವರ ದೇವಸ್ಥಾನದ ಬಳಿ ಸಂಸ್ಕೃತ ಸಭಾ ಭವನದಿಂದ ರಕ್ತದಾನ ಶಿಬಿರ, ಸಸಿಗಳ ವಿತರಣೆ, ಅನ್ನ ಸಂತರ್ಪಣೆ ನಡೆಸಲಾಗುತ್ತಿದೆ.
ದೇವರ ತಿಮಲಾಪುರ ಗ್ರಾಮದಲ್ಲಿ 12 ಅಡಿ ಎತ್ತರದ ಗಣೇಶ ಮೂರ್ತಿ ಭಕ್ತರನ್ನು ಸೆಳೆಯುತ್ತಿದೆ. ಬಣಗಾರ ಪೇಟೆ, ಪ್ರವಾಸಿ ಮಂದಿರ ವೃತ್ತ, ಜೋಯಿಸರ ಓಣಿ, ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.