

ಸಕಲೇಶಪುರ: ರಕ್ತದಾನದ ಕುರಿತು ಜನರಿಗೆ ತಪ್ಪು ಕಲ್ಪನೆಯಿದ್ದು ರಕ್ತದಾನ ಮಾಡುವುದರಿಂದ ಆರೋಗ್ಯ ಉತ್ತಮವಾಗುತ್ತದೆ ಎಂದು ತಹಶೀಲ್ದಾರ್ ಜಯಕುಮಾರ್ ಹೇಳಿದರು.
ಅಯೋಧ್ಯೆ ಬಲಿದಾನ್ ದಿವಸ್ ಅಂಗವಾಗಿ ವಿ.ಎಚ್.ಪಿ ಭಜರಂಗದಳ ಹಾಗೂ ಜೀವ ರಕ್ತದಾನ ನಿಧಿ, ಹಾಸನ ವತಿಯಿಂದ ಪಟ್ಟಣದ ಪುರಭವನದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದಲ್ಲದೆ ರೋಗಿಗಳ ಸಂಖ್ಯೆ ಸಹ ಹೆಚ್ಚುತ್ತಿದೆ. ಅನೇಕ ಸಂಧರ್ಭಗಳಲ್ಲಿ ರೋಗಿಗಳು ರಕ್ತ ಸಿಗದೆ ಸಾವನ್ನಪ್ಪುತ್ತಿರುವ ಉದಾಹರಣೆಗಳು ಇದೆ. ಈ ನಿಟ್ಟಿನಲ್ಲಿ ಪ್ರತಿಯೋರ್ವರು ರಕ್ತದಾನವನ್ನು ಮಾಡಲು ಮುಂದಾಗಬೇಕು. ವಿ.ಎಚ್.ಪಿ ಹಾಗೂ ಭಜರಂಗದಳ ಪ್ರತಿ ವರ್ಷ ಈ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷರಾಗಿ ಡಾ.ನವೀನ್ ಚಂದ್ರ ಶೆಟ್ಟಿ ಭಾಗವಹಿಸಿ ಮಾತನಾಡಿ ಹಲವು ಸಂಧರ್ಭಗಳಲ್ಲಿ ಮನುಷ್ಯನಿಗೆ ರಕ್ತದ ಅವಶ್ಯಕತೆ ಬರುತ್ತದೆ. ಆರೋಗ್ಯವಂತ ಎಲ್ಲಾರು ರಕ್ತದಾನ ಮಾಡಬಹುದು. ಸಕ್ಕರೆ ಕಾಯಿಲೆ ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿರುವವರು ರಕ್ತದಾನ ಮಾಡಲು ಅವಕಾಶವಿರುವುದಿಲ್ಲ. ರಕ್ತದಾನದ ಬಗ್ಗೆ ಯಾರು ಆತಂಕ ಪಡುವುದು ಬೇಡ, ನೀಡಿದ ರಕ್ತ 24 ಗಂಟೆಗಳಲ್ಲಿ ಪುನರ್ ಉತ್ಪತ್ತಿ ಆಗುತ್ತದೆ ಎಂದರು.
ಯೋಗ ಚೇತನ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀರಂಗನಾಥ್ ರವರನ್ನು ಅವರ ಸಮಾಜ ಸೇವೆ ಹಿನ್ನೆಲೆಯಲ್ಲಿ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ ಮಿಥುನ್, ಜೀವ ರಕ್ತನಿಧಿಯ ಮೋಹನ್ ಕುಮಾರ್, ಮೋಹನ್, ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್, ಭಜರಂಗದಳ ರಾಜ್ಯ ಸಹ ಸಂಚಾಲಕ ರಘು ಸಕಲೇಶಪುರ, ವಿಎಚ್ಪಿ ಗೌರವ ಅಧ್ಯಕ್ಷ ಬಾಬುಜೀ ನಗರ್ ವಾಲ್, ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಸಂಘಿ, ಸಂಘಟನೆ ಮುಖಂಡರುಗಳಾದ ಕೌಶಿಕ್ ಇನ್ನಿತರರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.