

ರಾಯಚೂರು: ಸ್ವಾತಂತ್ರೋತ್ಸವ ನಿಮಿತ್ತ ಆ.15ರಂದು ಜಿಲ್ಲಾಡಳಿತದಿಂದ ಹಮ್ಮಿಕೊಂಡಿರುವ ಬೃಹತ್ ರಕ್ತದಾನ ಶಿಬಿರದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡುವಂತೆ ಪ್ರೇರೇಪಿಸುವ ಕೆಲಸ ಮಾಡಬೇಕು ಎಂದು ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ ತಿಳಿಸಿದರು.
ಸ್ಥಳೀಯ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ರಕ್ತದಾನ ಶಿಬಿರದ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ರಕ್ತದಾನಿಗಳನ್ನು ಸೇರಿಸುವ ನಿಟ್ಟಿನಲ್ಲಿ ಅಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
ರಕ್ತದಾನ ಮಾಡಲು ಪ್ರತಿಯೊಬ್ಬರು ಮುಂದೆ ಬರಬೇಕು. ರಕ್ತದಾನದ ಕುರಿತು ಎಲ್ಲರಲ್ಲಿ ಜಾಗೃತಿ ಮೂಡಿಸಬೇಕು. ಶಿಬಿರಕ್ಕೂ ಮೊದಲು ರಕ್ತದಾನಿಗಳ ಪಟ್ಟಿ ಸಿದ್ಧಪಡಿಸಿಕೊಂಡು ಶಿಬಿರದ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು. ವಿವಿಧ ಇಲಾಖೆ ಮತ್ತು ಕಾಲೇಜುಗಳಿಗೆ ಶಿಬಿರದ ಕುರಿತು ತಿಳಿಸಬೇಕು.
ಶಿಬಿರದಲ್ಲಿ ಸಮರ್ಪಕ ವೈದ್ಯಕೀಯ ಸೇವೆ ದೊರೆಯುವಂತೆ ಕ್ರಮಕೈಗೊಳ್ಳಬೇಕು. ವಿವಿಧ ಇಲಾಖೆ ನೌಕರರು ರಕ್ತದಾನಕ್ಕೆ ಮುಂದಾಗಬೇಕು. ಈ ಬಾರಿ ಸುಮಾರು ಸಾವಿರ ಜನರು ರಕ್ತದಾನಕ್ಕೆ ಮುಂದಾಗುವಂತೆ ಸಾಧ್ಯತೆಗಳಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಡಾ.ಕೆ.ಆರ್.ದುರಗೇಶ ತಿಳಿಸಿದರು.
ಸಭೆಯಲ್ಲಿ ಡಿಎಚ್‌ಒ ಡಾ.ಸುರೇಂದ್ರಬಾಬು, ಜಿಲ್ಲಾ ಶಸಚಿಕಿತ್ಸಕ ಡಾ.ಎನ್.ವಿಜಯಶಂಕರ, ಜಿಲ್ಲಾ ಕಾರ್ಮಿಕ ಅಕಾರಿ ಆರತಿ ಹಾಗೂ ವಿವಿಧ ಇಲಾಖೆ ಅಕಾರಿಗಳು ಉಪಸ್ಥಿತರಿದ್ದರು.