

ಕುಶಾಲನಗರ: ರಕ್ತದಾನ ಶಿಬಿರದಿಂದ ಹಲವು ಮಂದಿಗೆ ಸಹಕಾರಿಯಾಗಲಿದ್ದು, ದಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಇತರರ ಬಾಳಿಗೆ ಬೆಳಕಾಗಬೇಕಿದೆ ಎಂದು ಕುಶಾಲನಗರ ಪುರಸಭೆ ಅಧ್ಯಕ್ಷ ಬಿ.ಜಯವರ್ಧನ ಕರೆ ನೀಡಿದರು.
ಕುಶಾಲನಗರ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜ ಆಶ್ರಯದಲ್ಲಿ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದ ಅಂಗವಾಗಿ ಸ್ಥಳೀಯ ಗೌಡ ಸಮಾಜ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಸಂಘ-ಸಂಸ್ಥೆಗಳು ಇಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇಂತಹ ಮಹತ್ಕಾರ್ಯದಿಂದ ಅನೇಕರ ಪ್ರಾಣ ಉಳಿಯಲು ಸಹಕಾರಿಯಾಗಲಿದೆ ಎಂದರು.
ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಮಾತನಾಡಿ, ಎಲ್ಲ ಸಂದರ್ಭ ಎಲ್ಲರಿಗೂ ರಕ್ತದಾನ ಮಾಡುವ ಅವಕಾಶ ಸಿಗುವುದು ವಿರಳ. ಇಂತಹ ಶಿಬಿರಗಳ ಮೂಲಕ ದಾನಿಗಳು ರಕ್ತದಾನ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಎಸ್.ಚಿಣ್ಣಪ್ಪ ಮಾತನಾಡಿದರು. ಶಿಬಿರದಲ್ಲಿ ಒಟ್ಟು 78 ಯೂನಿಟ್ ರಕ್ತ ಸಂಗ್ರಹವಾಯಿತು. ಕಾರ್ಯಕ್ರಮ ಸಂಯೋಜಕ ಕೊಡಗನ ಹರ್ಷ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಮನ್, ಖಜಾಂಚಿ ಕೆ.ಕೆ.ಹೇಮಂತ್, ಗೌಡ ಸಮಾಜದ ಪ್ರಮುಖರಾದ ಕಾಶಿ ಪೂವಯ್ಯ, ಕೃಷ್ಣಮೂರ್ತಿ, ಮೈಸೂರಿನ ಸೆಂಟ್ ಜೋಸೆಫ್ ಆಸ್ಪತ್ರೆಯ ವೈದ್ಯ ಡಾ.ಮಹಮ್ಮದ್ ಇಬ್ರಾಹಿಂ, ಮಡಿಕೇರಿ ರಕ್ತನಿಧಿ ಘಟಕದ ಡಾ.ಕರುಂಬಯ್ಯ, ಡಾ.ಶಶಿಧರ್, ವೆಂಕಟೇಶ್ ಮೂರ್ತಿ ಮತ್ತಿತರರು ಇದ್ದರು.