ರಕ್ತದಾನ ಮಹತ್ವ ಕುರಿತು ಜಾಗೃತಿ ಅವಶ್ಯ

19Kush03
ಕುಶಾಲನಗರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತು ಅಭಾ ಕಾರ್ಡ್ ನೋಂದಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಾ.ಕೆ.ಕೆ.ಧರ್ಮಪ್ಪ, ಡಾ.ದರ್ಶನ್, ಕೆ.ಬಿ.ದೇವರಾಜ್, ಡಾ.ಐ.ಕೆ.ಮಂಜುಳಾ ಶಾಂತಿ ಇದ್ದರು.
Published on

ಕುಶಾಲನಗರ: ಭಾರತದಲ್ಲಿ ಬಹುತೇಕ ಜನರು ರಕ್ತದಾನ ಮಾಡಲು ಹೆದರುತ್ತಾರೆ. ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಾಧಿಕಾರಿ ಡಾ.ಕರುಂಬಯ್ಯ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಚಿಕ್ಕ ಅಳುವಾರ ಗ್ರಾಮದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಗುರುವಾರ ಜರುಗಿದ ರಕ್ತದಾನ ಶಿಬಿರ ಮತ್ತು ಅಭಾ ಕಾರ್ಡ್ ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಲ್ಲಿಯವರೆಗೆ ಜೀವವುಳಿಸುವ ರಕ್ತದಾನಕ್ಕೆ ಜನಸಮೂಹ ಮುಕ್ತವಾಗಿ ಬಂದಿಲ್ಲ. ರಕ್ತದಾನಕ್ಕೆ ಯಾವುದೇ ಪರ್ಯಾಯವಿಲ್ಲ. ಕೇವಲ ಒಂದು ದಾನವು ನಾಲ್ವರ ಜೀವವನ್ನು ಉಳಿಸುತ್ತದೆ. ರಕ್ತದಾನದಿಂದ ಹೆಚ್ಚುವರಿ ಕಬ್ಬಿಣಾಂಶ ಹೊರಹೋಗುತ್ತದೆ. ಹೆಚ್ಚುವರಿ ಕಬ್ಬಿಣಾಂಶದಿಂದ ಅಧಿಕ ರಕ್ತದ ಒತ್ತಡ ಮುಂತಾದ ಅಡ್ಡ ಪರಿಣಾಮಗಳಿರುತ್ತವೆ. ಇದು ಲಿವರ್, ಹೃದಯ ಮತ್ತು ಪಿತ್ತಜನಕಾಂಗದಲ್ಲಿ ಶೇಖರಣೆಯಾಗಿ ಹೃದಯಬೇನೆ, ರಕ್ತದೊತ್ತಡ ಉಲ್ಬಣವಾಗುತ್ತದೆ. ನಾವು ರಕ್ತದಾನ ಮಾಡಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.

ಮಡಿಕೇರಿ ಶಾಸಕ ಮಾತನಾಡಿ, ಜಗತ್ತಿನ ಪ್ರತಿಯೊಬ್ಬರೂ ರಕ್ತದಾನದ ಮಹತ್ವ ತಿಳಿದು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಜೀವ ಉಳಿಸಬೇಕು, ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ಹಾಗೂ ದೇಹದ ಒತ್ತಡ ಸುಧಾರಿಸಿ, ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವುದಲ್ಲದೇ ಹೃದಯಾಘಾತದಂತಹ ಅನೇಕ ಕಾಯಿಲೆಗಳು ಶಮನವಾಗುತ್ತವೆ. ರಕ್ತದಾನ ಮಹಾದಾನವಾಗಿದ್ದು ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲದಿರುವುದರಿಂದ ರಕ್ತವಿಲ್ಲದವರಿಗೆ ರಕ್ತದಾನ ಮಾಡುವುದರ ಮೂಲಕ ಮಾನವೀಯತೆ ಮೆರೆಯಬೇಕು ಎಂದು ತಿಳಿಸಿದರು.

ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕ ಡಾ.ಕೆ.ಕೆ.ಧರ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಶಾಂತಿ, ಶಿರಂಗಾಲದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದರ್ಶನ್, ತೊರೆನೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ದೇವರಾಜ್, ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಐ.ಕೆ.ಮಂಜುಳಾ, ಡಾ.ಬಿ.ಎಸ್.ಗುಣಶ್ರೀ, ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net