

ಗದಗ: ರಕ್ತದಾನ, ನೇತ್ರದಾನ ಶ್ರೇಷ್ಠದಾನಗಳಾಗಿದ್ದು ರಕ್ತದಾನದ ಮೂಲಕ ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಿದರೆ, ನೇತ್ರದಾನ ಬೇರೆಯವರ ಜೀವನಕ್ಕೆ ಬೆಳಕನ್ನು ನೀಡಬಹುದು. ಆದ್ದರಿಂದ ಎಲ್ಲರೂ ರಕ್ತದಾನವನ್ನು ಮಾಡಿ ಬೇರೆಯವರ ಜೀವವನ್ನು ಉಳಿಸಬೇಕು ಎಂದು ಐಎಂಎ ಮಾಜಿ ಅಧ್ಯಕ್ಷ ಪ್ಯಾರಅಲಿ ನೂರಾನಿ ಹೇಳಿದರು.
ವಿದ್ಯಾದಾನ ಸಮಿತಿಯ ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಎಂಎ ಬ್ಲಡ್ ಬ್ಯಾಂಕ್, ಅಂಬಿಕಾ ಬ್ಲಡ್ ಬ್ಯಾಂಕ್ ಹಾಗೂ ಡಾ.ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ರಕ್ತದಾನ ಹಾಗೂ ನೇತ್ರದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಅದಕ್ಕಾಗಿ ರಕ್ತದಾನಕ್ಕೆ ಅಷ್ಟೂಂದು ಮಹತ್ವವಿದೆ ಎಂದರು.
ಡಾ. ಅನಂತ ಶಿವಪೂರ, ಮುಕುಂದ ಪೋತ್ನಿಸ್, ಗುರಣ್ಣ ಬಳಗಾನೂರ, ಡಾ.ಆರ್.ಟಿ.ಪವಾಡಶೆಟ್ಟರ, ವಿಜಯ ಮೇಲಗಿರಿ, ಶುಭಲಕ್ಷ್ಮಿ ಹುಯಿಲಗೋಳ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ವಿದ್ಯಾದಾನ ಸಮಿತಿ ಅಧ್ಯಕ್ಷ ಡಿ.ಬಿ. ಹುಯಿಲಗೋಳ ಅಧ್ಯಕ್ಷತೆ ವಹಿಸಿದ್ದರು.
ಡಾ. ಗಂಗೂಬಾಯಿ ಪವಾರ, ಪ್ರಾಚಾರ್ಯ ಎಂ.ಸಿ. ಕಟ್ಟಿಮನಿ, ಪವನ ಹುಯಿಲಗೋಳ, ಪ್ರತೀಕ ಹುಯಿಲಗೋಳ, ಡಾ. ರಾಜೇಶ ಜನ್ನಾ, ಟಿಪ್ಪುಸುಲ್ತಾನ ಸೋಮನಕಟ್ಟಿ, ಎಚ್.ಜಿ. ದೇಸಾಯಿ, ಎಂ.ಡಿ. ವಡವಿ, ವಸಂತ ವೀರಾಪೂರ, ವಿ.ಪಿ. ಪಾಟೀಲ, ಯು. ಎಸ್. ನಿಪ್ಪಾಣಿಕರ, ವಿಜಯಕುಮಾರ ಬೆಳಗಲಿ ಸೇರಿ 50ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.100ಕ್ಕೂ ಹೆಚ್ಚು ಜನ ನೇತ್ರದಾನ ಮಾಡಿದರು.ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಕ್ತದಾನ ಶಿಬಿರದಲ್ಲಿ ರಕ್ತದಾನ ಮತ್ತು ನೇತ್ರದಾನ ಮಾಡಿದರು. ದತ್ತಾತ್ರೇಯ ವೈಕುಂಠೆ ರಕ್ತದಾನ ಶಿಬಿರ ನಡೆಸಿಕೊಟ್ಟರು.
ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ವಂದಿಸಿದರು.