

ಎನ್.ಆರ್.ಪುರ: ಒಬ್ಬರು ರಕ್ತ ದಾನ ಮಾಡಿದರೆ ಮೂರು ಜನರ ಜೀವ ಉಳಿಸಬಹುದು ಎಂದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ಶಿಬಿರ ಆಯೋಜಕ ಎಸ್.ಎಚ್.ಹನುಮಂತಪ್ಪ ತಿಳಿಸಿದರು.
ಕುದುರೆಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುದುರೆಗುಂಡಿ ಗೆಳೆಯರ ಬಳಗ ಹಾಗೂ ಶಿವಮೊಗ್ಗ ಮೆಗ್ಗಾನ್ ರಕ್ತ ನಿಧಿ ಕೇಂದ್ರ ಆಯೋಜಿಸಿದ್ದ ರಕ್ತ ದಾನ ಶಿಬಿರದಲ್ಲಿ ರಕ್ತ ದಾನ ಮಾಡಿದವರಿಗೆ ಸರ್ಟಿಫಿಕೇಟ್ ವಿತರಿಸಿ ಮಾತನಾಡಿದರು. ಒಬ್ಬರಿಂದ 350 ಯೂನಿಟ್ ರಕ್ತ ಸಂಗ್ರಹ ಮಾಡುತ್ತೇವೆ. ಇದರಲ್ಲಿ ಕೆಂಪು ರಕ್ತ, ಬಿಳಿ ರಕ್ತ ಹಾಗೂ ಪ್ಲಾಸ್ಮಾ ಸೇರಿ 3 ವಿಭಾಗ ಮಾಡುತ್ತೇವೆ. ಇದರಿಂದ ಅಗತ್ಯವಿರುವ ಮೂರು ಜನರಿಗೆ ರಕ್ತ ನೀಡಬಹುದು. ತುರ್ತು ಸಂದರ್ಭದಲ್ಲಿ ಜನರ ಜೀವ ಉಳಿಯಲಿದೆ ಎಂದರು.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಿಂದ ಪ್ರತಿ ವರ್ಷ 10 ರಿಂದ 15 ಬಾರಿ ರಕ್ತ ದಾನ ಶಿಬಿರ ನಡೆಸುತ್ತೇವೆ. ಸಂಗ್ರಹವಾದ ರಕ್ತವನ್ನು ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಸೇರಿದಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯವಿರುವ ಬಿಪಿಎಲ್ ಕಾರ್ಡು ಹೊಂದಿದ ಬಡ ರೋಗಿಗಳಿಗೆ, ಎಸ್‌ಟಿ ಹಾಗೂ ಎಸ್‌ಸಿ ಜನಾಂಗದ ರೋಗಿಗಳಿಗೆ ಉಚಿತವಾಗಿ ನೀಡುತ್ತೇವೆ. ಕುದುರೆಗುಂಡಿಯ ಗೆಳೆಯರ ಬಳಗದವರು ಸಹ ವರ್ಷಕ್ಕೆ 2 ರಿಂದ 3 ಬಾರಿ ರಕ್ತ ದಾನ ಶಿಬಿರ ಏರ್ಪಡಿಸಿ ರಕ್ತ ಸಂಗ್ರಹಿಸಿ ನಮಗೆ ನೀಡುತ್ತಾರೆ. ಈ ಭಾಗದ ರೋಗಿಗಳಿಗೆ ತುರ್ತು ರಕ್ತ ಬೇಕಾದಾಗ ಮೆಗ್ಗಾನ್ ಆಸ್ಪತ್ರೆಯಿಂದಲೂ ಪಡೆಯುತ್ತಾರೆ. ಆದ್ದರಿಂದ ಆರೋಗ್ಯವಂತರು ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು.
ರಕ್ತದಾನ ಶಿಬಿರದಲ್ಲಿ 74 ಯೂನಿಟ್ ರಕ್ತ ಸಂಗ್ರಹವಾಯಿತು. ವೈದ್ಯರಾದ ಮಂಜು, ಶ್ರೀಲಕ್ಷ್ಮೀ, ಸ್ಟಾಪ್ ನರ್ಸ್‌ಗಳಾದ ನಯನಾ, ಸುಷ್ಮಾ, ರಕ್ತ ಪರೀಕ್ಷೆಯ ಟೆಕ್ನಿಷನ್ ಸಾಂಡ್ರಾ , ಕುದುರೆಗುಂಡಿ ಗೆಳೆಯರ ಬಳಗದ ಸದಸ್ಯರು ಇದ್ದರು.