ರಕ್ತ ದಾನದಿಂದ ಉತ್ತಮ ಆರೋಗ್ಯ

Published on

ಸುಂಟಿಕೊಪ್ಪ: ರಕ್ತ ದಾನದಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳವುದರ ಜತೆಗೆ ಮತ್ತೊಬ್ಬರ ಜೀವ ಉಳಿಸಬಹುದು. ಹೀಗಾಗಿ ಪ್ರತಿಯೊಬ್ಬರೂ ಕನಿಷ್ಠ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ಇಂಡಿಯನ್ ರೆಡ್‌ಕ್ರಾಸ್ ಸಭಾಪತಿ ರವೀಂದ್ರ ರೈ ಹೇಳಿದರು.


ಸುಂಟಿಕೊಪ್ಪ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಬುಧವಾರ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಯೂತ್ ರೆಡ್‌ಕ್ರಾಸ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ, ಮಡಿಕೇರಿ ರಕ್ತ ನಿಧಿ, ಮಡಿಕೇರಿ ವಿವೇಕ ಜಾಗೃತ ಬಳಗ ಸಹಯೋಗದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಕ್ತದ ಬೇಡಿಕೆ ಜತೆಗೆ ನಮ್ಮಲ್ಲಿ ಅಪಘಾತ ಪ್ರಮಾಣಗಳು ಹೆಚ್ಚಾಗುತ್ತಿವೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.


ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತ ನಿಧಿ ಮುಖ್ಯಸ್ಥ ಡಾ.ಅನಿಲ್ ಕರುಂಬಯ್ಯ ರಕ್ತದಾನದ ಮಹತ್ವವನ್ನು ತಿಳಿಸಿಕೊಟ್ಟರು.
ಪದ್ಮವೇಣಿ, ಯೂತ್ ರೆಡ್‌ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ದೇವ, ರಕ್ತ ನಿಧಿಯ ಮೇಲ್ವಿಚಾರಕ ಧನಂಜಯ ಇದ್ದರು. 42ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net