ರಂಜಿಸಿದ ಬೆಳಗು ಸಂಗೀತ ಸಂಜೆ

sangeet sanje 1
Published on

ಬೀದರ್: ವಿಕಾಸ ಸಹಕಾರ ಬ್ಯಾಂಕ್ ಬೆಳ್ಳಿ ಹಬ್ಬದ ಸಂಭ್ರಮ ಮತ್ತು ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಬುಧವಾರ ರಾಂತ್ರಿ ಬೆಳಗು ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್ ನಿಂದ ಆಯೋಜಿಸಿದ್ದ ವಿಕಾಸ ಬೆಳಗು ಸಂಗೀತ ಸಂಜೆ ಜನಮನ ರಂಜಿಸಿತು.

ಹಲವು ಗಾಯಕರು ಕನ್ನಡ, ಹಿಂದಿ ಚಲನಚಿತ್ರ ಗೀತೆ ಮತ್ತು ಜಾನಪದ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಗಾಯಕಿ ಮಹೇಶ್ವರಿ ಪಾಂಚಾಳ ಗಣನಾಯಕ ಗೀತೆ ಸುಶ್ರಾವ್ಯವಾಗಿ ಹಾಡುವ ಮೂಲಕ ಶುರುವಾದ ಸಂಗೀತ ಸಂಜೆ, ಮೂರು ಗಂಟೆ ಪ್ರೇಕ್ಷಕರಿಗೆ ಹಿಡಿದಿಟ್ಟಿತು. ಕಿಚ್ಚ ಸುದೀಪ್ ಅಭಿನಯದ ರಾ ರಾ ರಕ್ಕಮ್ಮ ಸಾಂಗ್ ಅನ್ನು ಸಂಗೀತ ನಿರ್ದೇಶಕ ವೀರ ಸಮರ್ಥ, ಮಹೇಶ್ವರಿ ಮಸ್ತ್ ಹಾಡಿ, ರಂಗಮಂದಿರದಲ್ಲಿದ್ದ ಕಲಾಸಕ್ತರಿಗೆ ಹೆಜ್ಜೆ ಹಾಕುವಂತೆ ಮಾಡಿತು.

ಕಲಾವಿದರಾದ ಗುರುದೇವ, ಪ್ರಿಯಾಂಕಾ ಗುರುದೇವ, ಜಗನ್ನಾಥ, ನಾಗಶೆಟ್ಟಿ ಲಕೋಟೆ ಕೊಡಂಬಲ್, ಆಬೀದ್ ಅಲಿ ಖಾನ್, ಮಲ್ಲಿಕಾರ್ಜುನ ಶೀಲವಂತ, ಶಮೀರ್, ರವಿ ಮೂಲಗೆ, ಜ್ಞಾನರಾಜ ಅವರು ಹಲವು ಗೀತೆಗಳನ್ನು ಹಾಡಿ ರಂಜಿಸಿದರು. ಹಿರಿಯ ವೈದ್ಯ ಡಾ.ವಿ.ವಿ.ನಾಗರಾಜ ಏಕ್ ಪ್ಯಾರ್ ಕಾ ನಗ್ಮಾ ಹೈ ಹಾಡು ಹಾಡಿ ಸಭಿಕರ ಚಪ್ಪಾಳೆ ಗಿಟ್ಟಿಸಿಕೊಂಡರು.

ವಿಜಯವಾಣಿ ಸ್ಥಾನಿಕ ಸಂಪಾದಕ ಸದಾನಂದ ಜೋಶಿ ಉದ್ಘಾಟಿಸಿ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಪ್ರದಾಯ ನಮ್ಮ ಸಾಮಾಜಿಕ ವ್ಯವಸ್ಥೆ ಬಲಗೊಳಿಸುತ್ತವೆ. ಆಧುನಿಕತೆ ಗುಂಗಿನಲ್ಲಿ ಭವ್ಯ ಪರಂಪರೆಯುಳ್ಳ ಅನೇಕ ಕಲೆ ನಶಿಸುತ್ತಿವೆ. ಇದನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕಿದೆ. ಪಾಶ್ಚಾತ್ಯ ಸಂಸ್ಕೃತಿ ಭಾರತೀಯರ ಮನ, ಮನೆಯಿಂದ ದೂರವಿಡುವ ಅಗತ್ಯವಿದೆ ಎಂದರು.

ಸಂಗೀತ ನಿರ್ದೇಶಕ ವೀರ ಸಮರ್ಥ, ಶಿವಕುಮಾರ ಶೆಟಕಾರ ಮಾತನಾಡಿದರು. ವಿಕಾಸ ಸಹಕಾರ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ರಮೇಶ ಪುರೋಹಿತ, ವೆಂಕಪ್ಪ ಮಲ್ಲಿಕಾರ್ಜುನ, ಗಂಗಾಧರ ಪತ್ತಾರ್, ಪ್ರಸನ್ನ ಹಿರೇಮಠ, ಬೆಳಗು ಸಂಸ್ಥೆಯ ಅಧ್ಯಕ್ಷ ಅನೀಲಕುಮಾರ ದೇಶಮುಖ, ಉಪಾಧ್ಯಕ್ಷೆ ಮಂಜುಳಾ ಮೂಲಗೆ, ಸದಸ್ಯರಾದ ಡಾ.ಡಿ.ಎ ಪಾಟೀಲ್, ತ್ರಿವೇಣಿ ಕಾರ್ನಾಡ್, ಶಿಖರೇಶ್ವರ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net