

ಕಲಬುರಗಿ: ರಂಜಾನ್‌ನಲ್ಲಿ ರೋಜಾ ಇರುವ ಮುಸ್ಲಿಂ ಕೈದಿಗಳಿಗೆ ಹಣ್ಣು ನೀಡಲು ಅವಕಾಶ ನೀಡಿಲ್ಲ ಎಂದು ಕೈದಿಗಳು ಗಲಾಟೆ ಮಾಡಿದ ಘಟನೆ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾಗಿದೆ. ರಂಜಾನ್‌ನಲ್ಲಿ ತಿಂಗಳಲ್ಲಿ ಮುಸ್ಲಿಮರು ರೋಜಾ ಆಚರಿಸುತ್ತಿದ್ದು, ಕುಟುಂಬಸ್ಥರು, ವಿವಿಧ ಮುಸ್ಲಿಂ ಸಂಘಟನೆಗಳು ಜೈಲಿನಲ್ಲಿನ ಮುಸ್ಲಿಮ್ ಕೈದಿಗಳಿಗೆ ಹಣ್ಣು ಹೊರಗಡೆಯಿಂದ ಪ್ರತಿವರ್ಷ ಕಳುಹಿಸುವುದು ವಾಡಿಕೆ. ಆದರೆ ಮಾ.೧೩ರಂದು ಗುರುವಾರ ಸಂಜೆ ಹಣ್ಣಿನ ವಾಹನ ಒಳಗೆ ಬಿಡಲು ಪೊಲೀಸ್ ಸಿಬ್ಬಂದಿ ನಿರಾಕರಿಸಿದ್ದಾರೆ. ಇದು ಗದ್ದಲಕ್ಕೆ ಕಾರಣವಾಗಿದ್ದು, ಕೈದಿಗಳು ಗೇಟ್‌ಗಳನ್ನು ಹಿಡಿದು ಕಿರಿಕಿರಿ ಮಾಡಿದ್ದಾರೆ. ಕಿರುಚಾಟ ಮಾಡಿ, ಮುಖ್ಯ ಗೇಟ್‌ವರೆಗೆ ಬಂದು ಕಿಟಕಿಗಳನ್ನು ಒಡೆದು, ಕೂಗಾಟ, ಒದರಾಟ ಮಾಡಿದ್ದಾರೆ. ತಕ್ಷಣ ಅಧಿಕಾರಿಗಳು ಕೈದಿಗಳ ಜತೆ ಮಾತನಾಡಿದ್ದು, ಪ್ರತಿಬಾರಿಯಂತೆ ಈ ಬಾರಿಯೂ ಹಣ್ಣು ಒಳಗೆ ಬಿಡಿ ಎಂದು ಕೈದಿಗಳು ಆಗ್ರಹಿಸಿದ್ದಾರೆ. ನಂತರ ತಪಾಸಣೆ ಮಾಡಿ, ಹಣ್ಣು ಒಳಗಡೆ ಬಿಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಕುರಿತು ಜೈಲ್ ಮುಖ್ಯ ಅಧೀಕ್ಷಕರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ದೊರೆಯಲಿಲ್ಲ.