

ಹುಬ್ಬಳ್ಳಿ: ಇಲ್ಲಿಯ ಕಲಾವಿದ ದಿನೇಶ ವಿ. ಚಿಲ್ಲಾಳ ಅವರು ಸುಭಾಸಚಂದ್ರ ಬೋಸ್ ಹಾಗೂ ಇತರ ಸ್ವಾತಂತ್ರ್ಯಯೋಧರ ಕುರಿತು ಬಿಡಿಸಿದ ರಂಗೋಲಿ ಕಲೆಗೆ ಧಾರವಾಡ ಜಿಲ್ಲಾ ಮಟ್ಟದಲ್ಲಿ ಮೊದಲ ಸ್ಥಾನದೊಂದಿಗೆ 10 ಸಾವಿರ ರೂ. ನಗದು ಬಹುಮಾನ ಲಭಿಸಿದೆ.
ಕೇಂದ್ರ ಸಂಸ್ಕೃತಿ ಸಚಿವಾಲಯವು ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಿಲ್ಲಾಳ ಅವರು, ಸುಭಾಸಚಂದ್ರ ಬೋಸ್ ಅವರು 1939ರಲ್ಲಿ ಹಾವೇರಿಗೆ ಬಂದ ಸಂದರ್ಭದಲ್ಲಿ ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ತೆಗೆಸಿಕೊಂಡ ಭಾವಚಿತ್ರವನ್ನು ರಂಗೋಲಿಯಲ್ಲಿ ಅರಳಿಸಿ ಗಮನ ಸೆಳೆದಿದ್ದರು.
ಜಿಲ್ಲಾ ಮಟ್ಟದ ವಿಜೇತರು ರಾಜ್ಯ ಮಟ್ಟದ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ನಂತರ ರಾಷ್ಟ್ರ ಮಟ್ಟದ ಸ್ಪರ್ಧೆಗೂ ಹೋಗುವ ಅವಕಾಶ ಇದೆ ಎಂದು ತಿಳಿಸಲಾಗಿದೆ.