ರಂಗಾಸಕ್ತರ ಅಸಮಾಧಾನ

31 vikram 1
Published on

ಧಾರವಾಡ: ರಂಗಕರ್ವಿುಗಳನ್ನು ಬೆಳೆಸುವ ರಂಗಾಯಣ ಇವೆಂಟ್ ಮ್ಯಾನೇಜ್​ವೆುಂಟ್ ನಡೆಸುವ ಕೇಂದ್ರವಲ್ಲ. ಇಂತಹ ಕೇಂದ್ರಗಳಿಗೆ ರಂಗಭೂಮಿ ತಜ್ಞರು, ರಂಗ ಚಟುವಟಿಕೆಯಲ್ಲಿ ಸಕ್ರಿಯರಾಗಿರುವವರನ್ನು ನಿರ್ದೇಶಕರನ್ನಾಗಿ ನೇಮಿಸಬೇಕು. ಆದರೆ, ಯಾವುದೇ ಅನುಭವ ಇಲ್ಲದವರನ್ನು ನೇಮಕ ಮಾಡುವುದು ಸರಿಯಲ್ಲ ಎಂದು ನಗರದ ರಂಗಕರ್ವಿುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ತಿಂಗಳ ಹಿಂದೆ ಸರ್ಕಾರ ಬದಲಾದ ಸಂದರ್ಭದಲ್ಲಿ ಎಲ್ಲ ರಂಗಾಯಣಗಳ ನಿರ್ದೇಶಕರನ್ನು ಅಧಿಕಾರಕ್ಕೂ ಪೂರ್ವದಲ್ಲಿ ತೆರವುಗೊಳಿಸಿದ್ದನ್ನು ಸಹ ರಂಗಾಸಕ್ತರು, ಸಾಹಿತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಇದೀಗ ಅರ್ಹರನ್ನು ನೇಮಕ ಮಾಡದ ಹಿನ್ನೆಲೆಯಲ್ಲಿ ಮತ್ತೊಮ್ಮ ಧ್ವನಿ ಎತ್ತುವ ಮೂಲಕ ಸಮರ್ಥರ ನೇಮಕ ಮಾಡುವಂತೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗಾಯಣ ಮಾಜಿ ನಿರ್ದೇಶಕ ಡಾ. ಪ್ರಕಾಶ ಗರುಡ, ರಂಗ ಸಮಾಜ ಆಯ್ಕೆ ಮಾಡಿ ಶಿಫಾರಸು ಮಾಡುವವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ನಿಯಮ. ಆದರೆ, ಸರ್ಕಾರ ಹಸ್ತಕ್ಷೇಪ ಮಾಡಿ ನೇಮಕ ಮಾಡಿದ್ದು ಸರಿಯಲ್ಲ. ರಂಗ ಸಮಾಜ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ರಂಗ ಸಮಾಜದ ಸದಸ್ಯರು ಸರ್ಕಾರದ ಕೈಗೊಂಬೆಯಾಗದೆ ರಂಗಾಯಣ ಹಿತದೃಷ್ಟಿ ಕಾಯಬೇಕು. ಇಲ್ಲವಾದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ನಿರ್ದೇಶಕರಾಗಿ ರಮೇಶ ಪರವಿನಾಯ್ಕರ ಅವರನ್ನು ನೇಮಿಸಿದೆ. ಅವರು ಅಷ್ಟಾಗಿ ರಂಗಭೂಮಿ ಹಿನ್ನೆಲೆ ಹೊಂದಿಲ್ಲ. ಬಿಜೆಪಿ ಕಾರ್ಯಕರ್ತರು ಎಂಬ ಕಾರಣಕ್ಕೆ ನೇಮಿಸಿದ್ದು ಸಾಂಸ್ಕೃತಿಕ ಲೋಕಕ್ಕೆ ಕೆಟ್ಟ ಹೆಸರು ತರುವಂತಾಗಿದೆ. ರಂಗಾಯಣ ವ್ಯಾಪ್ತಿಯ ಜಿಲ್ಲೆಗಳಲ್ಲಿ ರಂಗಭೂಮಿಯೇ ಉಸಿರು ಎಂದು ಇರುವವರು ಸಾಕಷ್ಟಿದ್ದಾರೆ. ಅವರಲ್ಲಿ ಒಬ್ಬರನ್ನು ನೇಮಿಸಿದ್ದರೆ, ರಂಗಾಯಣ ಇನ್ನಷ್ಟು ಉತ್ತುಂಗಕ್ಕೆ ಏರಲು ಸಾಧ್ಯವಾಗುತ್ತಿತ್ತು ಎಂದರು.

ವಿಶ್ವೇಶ್ವರಿ ಹಿರೇಮಠ ಮಾತನಾಡಿ, ಡಾ. ಬರಗೂರ ರಾಮಚಂದ್ರಪ್ಪ ವರದಿ ಜಾರಿಯಾಗಿದ್ದರೆ ಇಷ್ಟೆಲ್ಲ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ. ನೇಮಕ ಕುರಿತು ಶಾಸಕ ಅರವಿಂದ ಬೆಲ್ಲದ ಅವರಿಗೆ ಮನವಿ ಮಾಡಿದರೆ ಸ್ಪಂದಿಸಿಲ್ಲ. ಬದಲಾವಣೆ ಅಸಾಧ್ಯ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ರಂಗಾಯಣಕ್ಕೆ ಸಮರ್ಥ ನಿರ್ದೇಶಕರ ಅಗತ್ಯವಿದೆ. ಕೂಡಲೆ ಮುಖ್ಯಮಂತ್ರಿ ಮಧ್ಯಸ್ಥಿಕೆ ವಹಿಸಿ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬರಗೂರ ವರದಿ ಸೇರಿ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಹೋರಾಟಗಾರ ಲಕ್ಷ್ಮಣ ಬಕ್ಕಾಯಿ, ಬಿ.ಐ. ಈಳಿಗೇರ, ರಂಗ ಕಲಾವಿದರಾದ ವಿಷಯಾ ಜೇವೂರ, ಆಶಾಯ ಸೈಯದ, ಗಿರಿಜಾ ಹಿರೇಮಠ, ಜಯಶ್ರೀ ಗೌವಳಿಯವರ, ಸಂತೋಷ ಮಹಾಲೆ, ಪ್ರಭು ಹಂಚಿನಾಳ, ಬಸವಲಿಂಗಯ್ಯ ಹಿರೇಮಠ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net