

ಮೈಸೂರು: ಮೂರು ವರ್ಷಗಳ ಬಳಿಕ ಚಿಣ್ಣರ ಮೇಳವನ್ನು ಈ ಸಲ ‘ಕಿಶೋರೋಲ್ಲಾಸ’ ಹೆಸರಿನಲ್ಲಿ ಏ.4ರಿಂದ ಮೇ 5ರ ವರೆಗೆ ರಂಗಾಯಣ ಆಯೋಜಿಸಿದೆ.
ಕರೊನಾ ಮತ್ತು ಪರ್ವ ನಾಟಕ ಪ್ರದರ್ಶನದ ಹಿನ್ನೆಲೆಯಲ್ಲಿ 2020ರಿಂದ ಈ ಮೇಳವನ್ನು ಹಮ್ಮಿಕೊಂಡಿರಲಿಲ್ಲ. ಈ ಸಲ ‘ನಮ್ಮೀ ತಾಯ್ನೆಲ’ ಶೀರ್ಷಿಕೆಯಡಿ ರಂಗಾಯಣದ ಆವರಣದಲ್ಲಿ ಶಿಬಿರ ನಡೆಯಲಿದೆ. ಮಾರ್ಚ್ 31ಕ್ಕೆ 7 ವರ್ಷ ತುಂಬಿದ ಹಾಗೂ 14 ವರ್ಷ ತುಂಬಿರದ ಮಕ್ಕಳಿಗೆ ಮಾತ್ರ ಪ್ರವೇಶ ಇದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏಪ್ರಿಲ್ 1ರಂದು ಬೆಳಗ್ಗೆ 10ಕ್ಕೆ ರಂಗಾಯಣದ ಕಚೇರಿಯಲ್ಲಿ ಒಬ್ಬರಿಗೆ ಒಂದು ಅರ್ಜಿಯಂತೆ ವಿತರಿಸಲಾಗುತ್ತದೆ. ಅರ್ಜಿ ಶುಲ್ಕ 100 ರೂ. ನಿಗದಿಪಡಿಸಲಾಗಿದೆ. 250 ಅರ್ಜಿಗಳನ್ನು ಮಾತ್ರ ನೀಡಲಾಗುವುದು. ಮೊದಲು ಬಂದವರಿಗೆ ಮೊದಲು ಆದ್ಯತೆ. ಯಾವುದೇ ಶಿಫಾರಸಿಗೆ ಆಸ್ಪದವಿಲ್ಲ ಎಂದು ಹೇಳಿದರು.
ಭರ್ತಿ ಮಾಡಿದ ಅರ್ಜಿಯನ್ನು ಏ.5ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು. ಪ್ರವೇಶ ಶುಲ್ಕ ಮಗುವೊಂದಕ್ಕೆ 3 ಸಾವಿರ ರೂ. ನಿಗದಿಪಡಿಸಿದ್ದು, ಮೈಸೂರು ರಂಗಾಯಣದ ಉಪನಿರ್ದೇಶಕರ ಹೆಸರಿನಲ್ಲಿ ಡಿಡಿ ತೆಗೆದು ಅರ್ಜಿಯೊಂದಿಗೆ ಲಗತ್ತಿಸಬೇಕು. ಮಗುವಿನ ಜನ್ಮ ದಿನಾಂಕದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಅಥವಾ ಜನನ ಪ್ರಮಾಣಪತ್ರದ ಪತ್ರಿ ನೀಡಬೇಕು ಎಂದು ತಿಳಿಸಿದರು.