

ಮೈಸೂರು: ಮೈಸೂರು ಸೇರಿದಂತೆ ರಾಜ್ಯದ ವಿವಿಧ ರಂಗಾಯಣಗಳ ನಿರ್ದೇಶಕ ಸ್ಥಾನಗಳಿಗೆ ಶೀಘ್ರದಲ್ಲೇ ನೇಮಕಾತಿ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ತಿಳಿಸಿದರು.
‘ಕರ್ನಾಟಕ ಸಂಭ್ರಮ-50’ ಕುರಿತು ನಗರದಲ್ಲಿ ಸೋಮವಾರ ಸಾಹಿತಿ, ಕಲಾವಿದರಿಂದ ಸಲಹೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರ ರಚನೆಯಾಗಿ 3 ತಿಂಗಳು ಕಳೆದಿವೆ. ರಂಗಾಯಣ, ಅಕಾಡೆಮಿ, ಪ್ರಾಧಿಕಾರಗಳ ನೇಮಕಾತಿಗೆ ಸಮಿತಿ ರಚನೆ ಮಾಡಲಾಗಿದೆ. ಈ ಕುರಿತು ಸಿಎಂ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದರು.
ಅನ್ಯ ಭಾಷಿಕರು ಕನ್ನಡ ಕಲಿಯಲು ಅನುಕೂಲವಾಗುವಂತೆ ಮೊಬೈಲ್ ಆ್ಯಪ್ ರಚನೆ ಮಾಡಲಾಗಿದ್ದು, ಅದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಸನಾತನ ಧರ್ಮದ ಕುರಿತು ಬಿಜೆಪಿಯ ಕೆ.ಎಸ್.ಈಶ್ವರಪ್ಪ ಮಾತನಾಡುವುದನ್ನು ಬಿಟ್ಟು ವಿಧಾನಸಭೆ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲಿ. ಬಳಿಕ ಧರ್ಮದ ಕುರಿತು ಮಾತನಾಡಲಿ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಎಂದೂ ತಮ್ಮ ಶಕ್ತಿಯ ಮೇಲೆ ಮುಖ್ಯಮಂತ್ರಿಯಾಗಿಲ್ಲ. ಅವರು ಲಾಟರಿ ಸಿಎಂ ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವರು, ಈಶ್ವರಪ್ಪ ಅವರೇ ಇದೀಗ ಲಾಟರಿ ಹೊಡೆಯುತ್ತಿದ್ದಾರೆ. ಅಂತಹ ವ್ಯಕ್ತಿಗೆ ಸಿದ್ದರಾಮಯ್ಯ ಕುರಿತು ಮಾತನಾಡುವಷ್ಟು ಯೋಗ್ಯತೆ ಇಲ್ಲ. ಅವರು ನಾಲಿಗೆಯನ್ನು ಬಿಗಿ ಹಿಡಿದು ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಕಾಂಗ್ರೆಸ್‌ನ 40 ಶಾಸಕರನ್ನಲ್ಲ, ಕೇವಲ 4 ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಿದ್ದು, ಈ ಹಿಂದೆ ಪಕ್ಷೇತರರಾಗಿ ನಾವೂ ಸಹಾಯ ಮಾಡಿದ್ದೆವು. ಬಳಿಕ ನಮ್ಮನ್ನು ಉಪಯೋಗಿಸಿಕೊಂಡು ಬಿಸಾಕಿದರು. ಒಳ್ಳೆಯದನ್ನು ಮಾಡಿದವರಿಗೆ ಬಿಜೆಪಿ ಎಂದಿಗೂ ಒಳ್ಳೆಯದನ್ನು ಮಾಡಲ್ಲ ಎಂದು ಕಿಡಿಕಾರಿದರು.
40 ಶಾಸಕರಿಂದ ಸರ್ಕಾರ ರಚನೆ ಸಾಧ್ಯವೇ? ಅಷ್ಟು ಸಂಖ್ಯಾಬಲ ಬಿಜೆಪಿ ಬಳಿ ಎಲ್ಲಿ ಇದೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಹೀಗಾಗಿ ಆಪರೇಷನ್ ಹಸ್ತ ಮಾಡುತ್ತಿಲ್ಲ. ಅದೆಲ್ಲ ಮಾಧ್ಯಮದವರ ಶಬ್ದ ಬಳಕೆಯಷ್ಟೇ. ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ಅವರನ್ನು ಸ್ವಾಗತ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ಕೊಟ್ಟರು.
ಶಾಸಕ ಬಸವರಾಜ ರಾಯರೆಡ್ಡಿ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಮಸ್ಯೆಯೂ ಇಲ್ಲ. ಅಧಿಕಾರಿಗಳ ನಡುವೆ ಸಮನ್ವಯ ಕೊರತೆ ಎಂದು ಅವರು ಹೇಳಿಲ್ಲ. ಮೊಬೈಲ್ ಕರೆಯನ್ನು ಅಧಿಕಾರಿಗಳು ಸ್ವೀಕಾರ ಮಾಡುತ್ತಿಲ್ಲ ಎಂದಿದ್ದಾರೆಯಷ್ಟೇ. ವರ್ಗಾವಣೆ ಕೆಲಸವನ್ನು ನನ್ನ ಗಮನಕ್ಕೆ ತಂದಿದ್ದರೆ ಮಾಡಿಕೊಡುತ್ತಿದ್ದೆ. ಅವರು ಸಿಎಂ ಗಮನಕ್ಕೆ ತಂದಿದ್ದಾರೆ. ಉಳಿದಂತೆ ಏನೂ ಸಮಸ್ಯೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.