

ಹಾಸನ: ನಗರದ ಬಿ.ಎಂ. ರಸ್ತೆ ಬಳಿ ಇರುವ ಶ್ರೀ ಉಡುಸಲಮ್ಮ ದೇವಸ್ಥಾನದಲ್ಲಿ ಕಾಂಗ್ರೆಸ್‌ನ ಮಹಿಳಾ ಘಟಕದಿಂದ ಮಂಗಳವಾರ ಪೂಜೆ ಸಲ್ಲಿಸುವ ಮೂಲಕ ಹಾಸನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ರಂಗಸ್ವಾಮಿ (ಬನವಾಸೆ ರಂಗಸ್ವಾಮಿ) ಪರ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ನಂತರ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ತಾರಾ ಚಂದನ್, ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಅವರಿಗೆ ಶುಭವಾಗಲಿ ಎಂದು ಗ್ರಾಮ ದೇವತೆ ಉಡುಸಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರಕ್ಕೆ ತೆರಳುತ್ತಿದ್ದೇವೆ. ನಮ್ಮ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಘಟಕದ ಆಯೋಜಕರಾದ ಪೂಜಾ ಅವರು ಚುನಾವಣೆ ಮುಗಿಯುವವರೆಗೂ ನಮ್ಮ ಜತೆ ಇದ್ದು, ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದಾರೆ. ಮೊದಲ ದಿನ ನಾಲ್ಕು ವಾರ್ಡ್‌ಗಳಲ್ಲಿ ಸಂಚರಿಸಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಮಾಜದಲ್ಲಿ ಮಹಿಳೆಯರು ತನ್ನದೆಯಾದ ಶಕ್ತಿ ಹೊಂದಿದ್ದಾರೆ. ಮಹಿಳೆಯರಿಂದ ದೇವರಿಗೆ ಪೂಜೆ ಸಲ್ಲಿಸಿ ನಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಾರ್ಥನೆ ಮಾಡಲಾಗಿದೆ. ಒಂದು ಮಹಿಳೆ ಕೂಗು ದೆಹಲಿವರೆಗೂ ಕೇಳಿಸಬೇಕು. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಪ್ರಣಾಳಿಕೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಇಂದಿನ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡದೆ ಜನ ವಿರೋಧಿಯಾಗಿ ಆಳ್ವಿಕೆ ನಡೆಸಿದೆ. ಕಮಿಷನ್ ಪಡೆಯುವ ಮೂಲಕ ಜನರ ದುಡ್ಡು ಲೂಟಿ ಹೊಡೆದಿದೆ. ಇಂದಿನಿಂದ ನಾರಿ ಶಕ್ತಿ ಪ್ರಾರಂಭವಾಗಿದೆ ಎಂದು ಹೇಳಿದರು.
ಹಾಸನ ಕ್ಷೇತ್ರದ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಮಾತನಾಡಿ, ರಾಷ್ಟ್ರೀಯ ವೀಕ್ಷಕರಾದ ಪೂಜಾ ಅವರ ಅಧ್ಯಕ್ಷತೆಯಲ್ಲಿ ಮತ್ತು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ತಾರಾ ಚಂದನ್ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾದ ದೇವರಾಜೇಗೌಡರ ನೇತೃತ್ವದಲ್ಲಿ ಪ್ರಚಾರ ಆರಂಭ ಮಾಡಿದ್ದೇವೆ. ಹಾಸನದ ಗ್ರಾಮ ದೇವತೆಯಾದ ಉಡುಸಲಮ್ಮನವರ ಆಶೀರ್ವಾದದಲ್ಲಿ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ನಾರಿ ಎಂದರೆ ಒಂದು ದೊಡ್ಡ ಶಕ್ತಿ. ಅವರ ಮೂಲಕ ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಬೇರೆ ಪಕ್ಷದವರ ಬಗ್ಗೆ ಟೀಕೆ ಮಾಡಲು ನಾನು ಇಚ್ಛಿಸುವುದಿಲ್ಲ. ಪ್ರಸ್ತುತದಲ್ಲಿ ಜೆಡಿಎಸ್ ಆಗಲಿ, ಬಿಜೆಪಿ ಆಗಲಿ ಜನರ ಬಗ್ಗೆ, ಅಭಿವೃದ್ಧಿ ಬಗ್ಗೆ ಯಾವ ಚಿಂತನೆ ಮಾಡುವುದಿಲ್ಲ. ದುರ್ಬಲ, ಬಡವರ ವಿಚಾರವಾಗಿ ಚರ್ಚೆ ಮಾಡಿ ಕೆಲಸ ಮಾಡಿಕೊಡುವ ಕಾಳಜಿ ಹೊಂದಿಲ್ಲ. ಪ್ರತಿನಿತ್ಯ ಒಬ್ಬರಿಗೊಬ್ಬರೂ ವಿರೋಧದ ಹೇಳಿಕೆ ಕೊಡುವ ಮೂಲಕ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಹಣದ ಮದದಲ್ಲಿ ಎರಡೂ ಪಕ್ಷಗಳು ಕೂಡ ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಸನ ನಗರದ 35 ವಾರ್ಡ್‌ಗಳ ಮನೆ ಮನೆಗೆ ತೆರಳಿ ಪಕ್ಷದ ಉದ್ದೇಶಗಳನ್ನು ತಿಳಿಸಿ ನಮ್ಮ ಅಭ್ಯರ್ಥಿ ಬಿ.ಕೆ. ರಂಗಸ್ವಾಮಿ ಪರ ಮತ ಯಾಚನೆ ಮಾಡಲಾಗುವುದು. ಭ್ರಷ್ಟಾಚಾರದಲ್ಲಿ ಬಿಜೆಪಿ ತೊಡಗಿದ್ದು, ಇದನ್ನು ತಡೆಯಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಕಾಂಗ್ರೆಸ್ ಜಾರಿಗೆ ತರಲು ಈಗಾಗಲೇ ನಿರ್ಧರಿಸಿರುವ ಪ್ರಣಾಳಿಕೆಯ ಭರವಸೆಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸಲಾಗುವುದು ಎಂದರು.