

ಮೈಸೂರು:ನಿರಂತರ ಫೌಂಡೇಶನ್‌ನಿಂದ ಆಯೋಜಿಸಿರುವ ಮೂರು ದಿನಗಳ ‘ರಂಗವಸಂತ’ ರಂಗೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಶುಕ್ರವಾರ ಮೈಲಾಕ್ ಮಾಜಿ ಅಧ್ಯಕ್ಷ ಆರ್.ರಘು ಅವರು ನಾಟಕೋತ್ಸವಕ್ಕೆ ಚಾಲನೆ ನೀಡಿ, ಯುವ ಜನರನ್ನು ಕೇಂದ್ರವಾಗಿರಿಸಿಕೊಂಡು ರಂಗಭೂಮಿ ಪರಿಚಯಿಸುತ್ತಲೇ ಸಾಮಾಜಿಕ ವಿಷಯಗಳಿಗೆ ಸ್ಪಂದಿಸುವ, ಮುಖಾಮುಖಿಯಾಗುವ ಪ್ರಜ್ಞಾವಂತಿಕೆ ಬೆಳೆಸಬೇಕು ಎಂದರು.
ನಿರಂತರ ತಂಡ ಅನೇಕ ಯುವ ಮನಸ್ಸುಗಳು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಗಟ್ಟಿಗೊಳಿಸುವಲ್ಲಿ ಪ್ರಭಾವ ಬೀರಿದೆ. ಸಮಕಾಲೀನ ವಿಷಯಗಳಿಗೆ ಸದಾ ತಮ್ಮ ನಾಟಕಗಳ ಮೂಲಕವೇ ಸ್ವಂದಿಸುತ್ತಾ ಬರುತ್ತಿರುವ ನಿರಂತರ ತಂಡವು ನೆಲ,ಜಲ, ಭಾಷೆ, ಸಂಸ್ಕೃತಿ ಮತ್ತು ಪರಿಸರವನ್ನು ಮೂಲ ಧಾತುವಾಗಿಸಿಕೊಂಡು ರಂಗಭೂಮಿಯನ್ನು ಒಂದು ಚಳವಳಿಯಾಗಿ ನೋಡುತ್ತಾ ಬರುತ್ತಿದೆ ಎಂದು ಬಣ್ಣಿಸಿದರು.
ಕರ್ನಾಟಕದ ರಂಗಭೂಮಿಯಲ್ಲಿ ಒಂದು ಮಹತ್ವದ ಸ್ಥಾನ ಪಡೆದಿದೆ. ನಾಟಕಗಳಲ್ಲಿ ವಸ್ತು, ವಿಷಯಗಳ ಕುರಿತು ಹೊಸ ಪ್ರಯೋಗಗಳನ್ನು ನಡೆಸುವ ದೃಷ್ಟಿಯಿಂದ ಕೆಲವು ವರ್ಷಗಳಿಂದ ಹಳೆಯ ನಿರಂತರದ ಗೆಳೆಯರು ಹೊಸ ನಾಟಕಗಳ ನಿರ್ದೇಶಿಸುವ ಪ್ರಯೋಗ ಮುಂದುವರೆದುಕೊಂಡು ಬರುತ್ತಿದೆ ಎಂದರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುದರ್ಶನ್, ನಾಟಕೋತ್ಸವಕ್ಕೆ ಶುಭ ಕೋರಿದರು. ನಿರಂತರ ಫೌಂಡೇಶನ್‌ನ ಪ್ರಸಾದ್ ಕುಂದೂರ್ ಇದ್ದರು.
ಬಳಿಕ ಅಜಯ್ ನಿನಾಸಂ ನಿರ್ದೇಶನದಲ್ಲಿ ಜಯರಾಮ್ ರಾಯಪುರ ಅವರ ‘ಸಿರಿಗೆ ಸೆರೆ’ ನಾಟಕವನ್ನು ಮಂಡ್ಯದ ಜನದನಿ ತಂಡ ಪ್ರಸ್ತುತ ಪಡಿಸಿತು.