ರಂಗಮಂದಿರಗಳಿಗಿಲ್ಲ ಉದ್ಘಾಟನೆ ಭಾಗ್ಯ!

01
Published on

ಜಗದೀಶ ಹೊಂಬಳಿ ಬೆಳಗಾವಿ: ನಗರದ ಟಿಳಕವಾಡಿ ಶುಕ್ರವಾರ ಪೇಟೆ ಬಳಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣ ಮಾಡಿರುವ ಎರಡು ರಂಗಮಂದಿರಗಳು ನಿರ್ಮಾಣಗೊಂಡು ಮೂರು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದು ರಂಗಭೂಮಿ ಕಲಾವಿದರ ಆಕ್ರೋಶಕ್ಕೂ ಕಾರಣವಾಗಿದೆ.

ಸುಮಾರು 52 ಕೋಟಿ ರೂ. ವೆಚ್ಚದಲ್ಲಿ ಬಹುಪಯೋಗಿ ಸೌಲಭ್ಯಗಳುಳ್ಳ ಸಂಕೀರ್ಣ ಕಟ್ಟಡ ನಿರ್ಮಿಸಿದ್ದು, ಅದರಲ್ಲಿ 1,250 ಆಸನ ವ್ಯವಸ್ಥೆಯುಳ್ಳ ಎರಡು ರಂಗಮಂದಿರ ನಿರ್ಮಿಸಲಾಗಿದೆ. 2-3 ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ದೊರೆತ್ತಿಲ್ಲ. ಇದರಿಂದ ಕಲಾವಿದರು ರಂಗಮಂದಿರ ಉದ್ಘಾಟನೆಯ ದಾರಿ ಕಾಯುತ್ತಿದ್ದಾರೆ. ನಗರದಲ್ಲಿ ವೃತ್ತಿ ರಂಗಭೂಮಿ ಕಲಾವಿದರಿಗಾಗಲಿ, ಹವ್ಯಾಸಿ ರಂಗ ಕಲಾವಿದರಿಗಾಗಲಿ ಸುಸಜ್ಜಿತ ರಂಗ ಮಂದಿರವಿಲ್ಲ. ಹೀಗಾಗಿ ಹೊಸದಾಗಿ ನಿರ್ಮಿಸಿರುವ ರಂಗಮಂದಿರವನ್ನಾದರೂ ಬೇಗ ಉದ್ಘಾಟಿಸಿ, ಕಲಾವಿದರ ಬಳಕೆಗೆ ಮುಕ್ತಗೊಳಿಸಲಿ ಎಂಬ ಕೂಗು ಕೇಳಿ ಬಂದಿದೆ.

ಬಹುಪಯೋಗಿ ಸಂಕೀರ್ಣ ಕಾರ್ಯ ಪೂರ್ಣ: ರಂಗಮಂದಿರವುಳ್ಳ ಬಹುಪಯೋಗಿ ಕಟ್ಟಡ ಸಂಕೀರ್ಣ ನಿರ್ಮಾಣಕ್ಕೆ 2020ರಲ್ಲಿ ಕಾರ್ಯಾದೇಶವಾಗಿ, 2021ರ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಗಡುವು ನೀಡಲಾಗಿತ್ತು, ಕಾರಣಾಂತರಗಳಿಂದ ಆಗಿರಲಿಲ್ಲ. 2023ರಲ್ಲೇ ಕಾಮಗಾರಿ ಅಂತ್ಯವಾದರೂ ಉದ್ಘಾಟನೆ ಭಾಗ್ಯ ದೊರೆಯುತ್ತಿಲ್ಲ.

ಮೊದಲು ಟಿಳಕವಾಡಿಯ ರಂಗಮಂದಿರ ಇದ್ದ ಜಾಗದಲ್ಲೇ 2.6 ಎಕರೆ ಪ್ರದೇಶದಲ್ಲಿ ಸಂಕೀರ್ಣ ನಿರ್ಮಿಸಲಾಗಿದೆ. 55 ಸಾವಿರ ಚದರಡಿ ಬೇಸ್‌ಮೆಂಟ್, 40 ಸಾವಿರ ಚದರಡಿ ಗ್ರೌಂಡ್‌ಫ್ಲೋರ್, 32 ಸಾವಿರ ಚದರಡಿಯ ಮೊದಲ ಮಹಡಿ ಹಾಗೂ 39 ಸಾವಿರ ಚದರಡಿ ಎರಡನೇ ಮಹಡಿ ಹೊಂದಿದೆ. ಬೇಸ್‌ಮೆಂಟ್‌ನಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರೌಂಡ್‌ಫ್ಲೋರ್‌ನಲ್ಲಿ ವಿವಿಧ ಅಂಗಡಿ-ಮುಂಗಟ್ಟು, ಸಾರ್ವಜನಿಕ ಉದ್ದೇಶಗಳ ಮಳಿಗೆಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಮೊದಲ ಮಹಡಿಯಲ್ಲಿ ವಸ್ತು ಪ್ರದರ್ಶನ ಕೇಂದ್ರ ನಿರ್ಮಾಣವಾಗಿ 2ನೇ ಮಹಡಿಯಲ್ಲಿ ರಂಗಮಂದಿರ ಹಾಗೂ ವಾಣಿಜ್ಯ ಮಳಿಗೆಗಳು ನಿರ್ಮಿಸಲಾಗಿದೆ.

ಕಲಾವಿದರ ಅಸಮಾಧಾನ: ಸದ್ಯ ನಿರ್ಮಾಣವಾದ ಬಹುಪಯೋಗಿ ಕಟ್ಟಡದ ಸ್ಥಳದಲ್ಲಿ ಮೊದಲು ರಂಗಮಂದಿರ ಇತ್ತು. ಆ ರಂಗಮಂದಿರ ನೆಲಸಮ ಮಾಡಿ ಬಹುಪಯೋಗಿ ಕಟ್ಟಡ ನಿರ್ಮಿಸಲಾಗಿದೆ. ಇದು ರಂಗಭೂಮಿ ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಕಟ್ಟಡದಲ್ಲಿ ರಂಗಮಂದಿರಕ್ಕೆ ಅಲ್ಪ ಸ್ಥಳಾವಕಾಶ ಕಲ್ಪಿಸಿ, ರಂಗಮಂದಿರ ನಿರ್ಮಿಸಿದರೂ ಲೋಕಾರ್ಪಣೆ ಮಾಡದಿರುವುದು ಕಲಾವಿದರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಬಹುಪಯೋಗಿ ಕಟ್ಟಡ ಸಂಕೀರ್ಣದ ಸಣ್ಣ-ಪುಟ್ಟ ಕಾಮಗಾರಿಗಳು ಅಷ್ಟೇ ಬಾಕಿ ಇವೆ. ಪ್ರಸ್ತುತ ಗುತ್ತಿಗೆದಾರರೇ ಕಟ್ಟಡವನ್ನು ನಿವರ್ಹಣೆ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ ಇಲಾಖೆ ಸಚಿವರಿಂದ ಉದ್ಘಾಟನೆ ದಿನಾಂಕ ನಿಗದಿ ಮಾಡುತ್ತೇವೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸ್ಮಾರ್ಟ್‌ಸಿಟಿ ಅಭಿವೃದ್ಧಿ ಸೊಸೈಟಿಯಿಂದ ಕಟ್ಟಡ ನಿರ್ವಹಣೆ ಆಗಲಿದೆ.

ಸಯೀದಾ ಆಪ್ರೀನ್‌ಬಾನು ಬಳ್ಳಾರಿ ಸ್ಮಾರ್ಟ್‌ಸಿಟಿ ಎಂಡಿ, ಬೆಳಗಾವಿ

ರಂಗಭೂಮಿ ಕಲಾವಿದರಿಗೆ ನಾಟಕ ಪ್ರದರ್ಶನಕ್ಕೆ ನಗರದಲ್ಲಿ ಸೂಕ್ತ ವೇದಿಕೆಗಳಿಲ್ಲ. ಹೀಗಾಗಿ ಎಪಿಎಂಸಿ ರಸ್ತೆಯ ‘ಚಿಂದೋಡಿ ಲೀಲಾ ನಾಟ್ಯ ಗೃಹ’ ನವೀಕರಣ ಮಾಡಿ, ಮರುಜೀವ ಕಲ್ಪಿಸಬೇಕು. ಟಿಳಕವಾಡಿಯಲ್ಲಿ ನಿರ್ಮಿಸಿರುವ ರಂಗಮಂದಿರ ಉದ್ಘಾಟಿಸಿದರೆ ಕಲಾವಿದರಿಗೆ ಅನುಕೂಲವಾಗುತ್ತದೆ.

| ಡಾ.ಅರವಿಂದ ಕುಲಕರ್ಣಿ ಅಧ್ಯಕ್ಷ ರಂಗಸಂಪದ, ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net