ರಂಗಮಂದಿರ ಹೈಟೆಕ್‌ಗೊಳಿಸುವ ಪ್ರಯತ್ನ

23rajesh1
Published on

ಚಾಮರಾಜನಗರ: ಜಾನಪದ ಕಲೆಗಳ ತವರೂರು ಚಾಮರಾಜನಗರದ ರಂಗಭೂಮಿ ಕಲಾವಿದರಿಗೆ ಸಹಕಾರಿಯಾಗಿರುವ ಜಿಲ್ಲಾ ರಂಗಮಂದಿರಕ್ಕೆ ಹೈಟೆಕ್ ಸ್ಪರ್ಶ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ 2009-10 ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅನುಮೋದನೆ ದೊರೆಯಿತು. ಸುಮಾರು 20 ಗುಂಟೆ ಜಾಗದಲ್ಲಿ 3.5 ಕೋಟಿ ರೂ, ವೆಚ್ಚದಲ್ಲಿ ಪ್ರಾರಂಭವಾದ ಕಾಮಗಾರಿ ಹಲವಾರು ಕಾರಣಗಳಿಂದ ಕುಂಟುತ್ತಾ ಸಾಗಿತ್ತು. ಬಳಿಕ 10 ವರ್ಷಗಳ ಬಳಿಕ ಮುಂದುವರಿದ ಕಾಮಗಾರಿಗೆ 2.50 ಕೋಟಿ ರೂ, ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈ ವೇಳೆ ರಂಗಮಂದಿರದ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕಲಾವಿದರು ಹಾಗೂ ರಂಗಾಸಕ್ತರು ಒತ್ತಾಯ ಮಾಡುತ್ತಲೇ ಬರುತ್ತಿದ್ದರು. ಬಳಿಕ 2022 ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಅವರ ಇಚ್ಛಾಶಕ್ತಿಯಿಂದ ಕಾಮಗಾರಿ ಪೂರ್ಣಗೊಂಡು ಜಿಲ್ಲೆಯಾಗಿ 25 ವರ್ಷ ತುಂಬುವ ಸಂದರ್ಭದಲ್ಲಿ ವರನಟ ಡಾ.ರಾಜ್‌ಕುಮಾರ್ ಹೆಸರಿನಲ್ಲಿ ಜಿಲ್ಲಾ ರಂಗಮಂದಿರವನ್ನು ಲೋಕಾರ್ಪಣೆಗೊಳಿಸಿದ್ದರು.

ರಂಗಮಂದಿರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ ಎಂದು ಕಲಾವಿದರು ಹಾಗೂ ರಂಗಕರ್ಮಿಗಳಿಂದ ಒತ್ತಾಯ ಕೇಳಿಬರುತ್ತಿತ್ತು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಂದಾಜು 2 ಕೋಟಿ ರೂ, ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಇಲಾಖೆಯ ನಿರ್ದೇಶಕರಾಗಿರುವ ಕೆ.ಎಂ.ಗಾಯಿತ್ರಿ ಅವರು ಕೂಡ ಜಿಲ್ಲಾ ರಂಗಮಂದಿರದ ಅಭಿವೃದ್ಧಿಗೆ ಧನಾತ್ಮಕ ರೀತಿಯಲ್ಲಿ ಸ್ಪಂದಿಸಿದ್ದಾರೆ. ಅದರಂತೆ ಅನುದಾನ ಬಿಡುಗಡೆಯಾದರೇ ಜಿಲ್ಲಾ ರಂಗಮಂದಿರದಲ್ಲಿರುವ ಕೊರತೆಗಳು ನೀಗುತ್ತದೆ ಎಂಬುದು ಕಲಾವಿದರ ಆಶಯವಾಗಿದೆ.

ಪ್ರಸ್ತಾವನೆ ಸಲ್ಲಿಸಿರುವ ಕಾಮಗಾರಿ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಾಮರಾಜನಗರ ನಿರ್ಮಿತಿ ಕೇಂದ್ರದಿಂದ ಪ್ರಸ್ತಾವನೆ ಪಡೆದು ಅಗತ್ಯವಾಗಿರುವ 6 ಕಾಮಗಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸುಮಾರು 55.70 ಲಕ್ಷ ರೂ, ಅನುದಾನದಲ್ಲಿ ಎನ್‌ಇಡಿ ಜೂಮ್ ಾರ್ ಅಥವಾ ಸ್ಪಾಟ್ ಲೈಟ್‌ಗಳನ್ನು ಅಳವಡಿಸುವ ಕಾಮಗಾರಿ. ಅಂದಾಜು 24 ಲಕ್ಷ ರೂ, ಅನುದಾನದಲ್ಲಿ ಎಲ್‌ಇಡಿ ಕನ್ಸೋಲ್ ಬೋರ್ಡ್, ಡಿಎಂಎಕ್ಸ್ ಸ್ಪಲ್ಟರ್, ಎಲ್‌ಇಡಿ ಸ್ಪಾಟ್ ಲೈಟ್‌ಗಳನ್ನು ಅಳವಡಿಸುವ ಕಾಮಗಾರಿ. ಸುಮಾರು 30 ಲಕ್ಷ ರೂ, ಅನುದಾನದಲ್ಲಿ ಡಿಎಂಎಕ್ಸ್ ಕೇಬಲ್ ಅಳವಡಿಕೆ ಹಾಗೂ ಎಲೆಕ್ಟ್ರಿಕಲ್ ವೈರಿಂಗ್ ಕಾಮಗಾರಿ. 17.80 ಲಕ್ಷ ರೂ, ಅನುದಾನದಲ್ಲಿ ಅತ್ಯಾಧುನಿಕ ಧ್ವನಿವರ್ಧಕಗಳನ್ನು ಅಳವಡಿಸುವ ಕಾಮಗಾರಿ. 30 ಲಕ್ಷ ರೂ, ಅನುದಾನದಲ್ಲಿ ಸೈಕ್ಲೋರಾಮ ಸ್ಕ್ರೀನ್, ಕರ್ಟೇನ್ಸ್, ಬ್ಯಾಕ್ ಡ್ರಾಪ್ ಹಾಗೂ ವೇದಿಕೆಗೆ ಸೈಡ್‌ವಿಂಗ್ ಅಳವಡಿಸುವ ಕಾಮಗಾರಿ ಹಾಗೂ 34 ಲಕ್ಷ ರೂ, ವೆಚ್ಚದಲ್ಲಿ ಅಕಾಸ್ಟಿಕ್ ಾಲ್ಸ್ ಸೀಲಿಂಗ್ ಅಳವಡಿಸುವ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟಾರೆ 2 ಕೋಟಿ ರೂ, ಅನುದಾನ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ಅವಶ್ಯಕವಾಗಿ ಆಗಬೇಕಿರುವುದು:

ಜಿಲ್ಲಾ ರಂಗಮಂದಿರದಲ್ಲಿ ಅನಿರೀಕ್ಷಿತವಾಗಿ ವಿದ್ಯುತ್ ವ್ಯತ್ಯಯವಾದರೇ, ಜನರೇಟರ್ ವ್ಯವಸ್ಥೆ ಇರುವುದಿಲ್ಲ. ಆಗಾಗಿ ಅತ್ಯಾಧುನಿಕ ಜನರೇಟರ್ ವ್ಯವಸ್ಥೆ ಆಗಬೇಕಿದೆ. ರಂಗಮಂದಿರಕ್ಕೆ ಪೂರ್ಣ ಪ್ರಮಾಣದ ಸುತ್ತುಗೋಡೆ ನಿರ್ಮಾಣವಾಗಬೇಕಿದೆ. ರಂಗಮಂದಿರದ ಹಪರ ಆವರಣದಲ್ಲಿ ಇಲಾಖೆಯ ಕಚೇರಿ ನಿರ್ಮಾಣ ಮಾಡಬೇಕಿದೆ ಇಲ್ಲವೇ ಲ್‌ಟಿ ವ್ಯವಸ್ಥೆ ಮಾಡಬೇಕಿದೆ. ಬಾಲ್ಕನಿಗೆ ಆಸನದ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಹೊರಾಂಗಣಕ್ಕೆ ಹೈಮಾಸ್ಟ್ ದೀಪದ ವ್ಯವಸ್ಥೆ, ಹೊರ ಆವರಣದಲ್ಲಿ ಶೌಚಾಲಯಗಳ ನಿರ್ಮಾಣ, ಕ್ಯಾಂಟಿನ್ ವ್ಯವಸ್ಥೆ, ಗಣ್ಯರ ವಿಶ್ರಾಂತಿ ಕೊಠಡಿ, ಪಾರ್ಕಿಂಗ್ ವ್ಯವಸ್ಥೆ ಮತ್ತು ಶೆಲ್ಟರ್ ನಿರ್ಮಾಣ ಹಾಗೂ ಬಹುಮುಖ್ಯವಾಗಿ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಬೇಕಿದೆ ಎಂಬ ಒತ್ತಾಯ ಕಲಾವಿದರು ಹಾಗೂ ರಂಗಕರ್ಮಿಗಳಿಂದ ಕೇಳಿಬರುತ್ತಲೇ ಇದೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೂ ಸರ್ಕಾರಕ್ಕೆ ಮನವಿಯನ್ನು ಮಾಡಲಾಗಿದೆ.

ರಚನಾತ್ಮಕ ಕೆಲಸ:

ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ನೇಮಕವಾಗಿರುವ ನಂಜುಂಡಯ್ಯ ಅವರು ಇಲಾಖೆಯಲ್ಲಿ ರಚನಾತ್ಮಕ ಕೆಲಸಗಳನ್ನು ಮಾಡುತ್ತಿದ್ದಾರೆ. ರಂಗಮಂದಿರಕ್ಕೆ ಮಾರ್ಗ ತೋರಿಸುವ ಬೋರ್ಡ್ ಅಳವಡಿಕೆ, ಇಲಾಖೆಗೆ ಬರುವ ಕಲಾವಿದರಿಗೆ ಕುಡಿಯುವ ನೀರು ಮತ್ತು ಕುಳಿತುಕೊಳ್ಳಲು ಖುರ್ಚಿಗಳ ವ್ಯವಸ್ಥೆ, ಸುತ್ತಲೂ ಸ್ವಚ್ಛತೆಗೆ ಒತ್ತು ನೀಡುವ ಮೂಲಕ ಕಲಾವಿದರು ಮತ್ತು ರಂಗಕರ್ಮಿಗಳಿಂದ ಪ್ರಶಂಸೆ ಪಡೆದುಕೊಂಡಿದ್ದಾರೆ. ಅದರಂತೆ ರಂಗಮಂದಿರದ ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಲಿ ಎಂಬುದು ಕಲಾವಿದರ ಅಭಿಪ್ರಾಯವಾಗಿದೆ.

ಜಿಲ್ಲೆಯಲ್ಲಿ ಉತ್ತಮವಾದ ರಂಗಮಂದಿರ ಲಭ್ಯವಿದ್ದು, ಹಲವಾರು ಸೌಲಭ್ಯಗಳ ಕೊರತೆ ಇದೆ. ಈ ನಿಟ್ಟಿನಲ್ಲಿ ಸುಮಾರು 2 ಕೋಟಿ ರೂ, ವೆಚ್ಚದಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ರಂಗಮಂದಿರವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳಿಸಿ ಡಾ.ರಾಜ್‌ಕುಮಾರ್ ಅವರ ಹೆಸರಿಗೆ ಗೌರವ ತರುವ ಪ್ರಯತ್ನ ಮಾಡಲಾಗುತ್ತಿದೆ.

-ನಂಜುಂಡಯ್ಯ, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಾಮರಾಜನಗರ

ಜಿಲ್ಲಾ ರಂಗಮಂದಿರದಲ್ಲಿ ನಾಲ್ಕೂ ಗೋಡೆ ಮತ್ತು ಕುರ್ಚಿಗಳು ಬಿಟ್ಟರೇ ಏನು ವ್ಯವಸ್ಥೆ ಇಲ್ಲ. ಆಗಾಗಿ ಸ್ಪಾಟ್‌ಲೈಟ್‌ಗಳ ವ್ಯವಸ್ಥೆ, ನೆಲಹಾಸು, 20 ಅಡಿ ಎತ್ತರದ ಏಣಿ, ಪ್ರತ್ಯೇಕ ರಿಹರ್ಸಲ್ ಶೆಡ್, ಸೌಂಡ್ ಸಿಸ್ಟಮ್ ಅಗತ್ಯವಾಗಿ ಆಗಬೇಕು. ಜತೆಗೆ ಅದರ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗಬೇಕು ಹಾಗೂ ಬಾಡಿಗೆ ಕಡಿಮೆಯಾದರೇ ಕಲಾವಿದರಿಗೆ ಅನುಕೂಲವಾಗುತ್ತದೆ.

-ಚಿತ್ರಾ ವೆಂಕಟರಾಜು, ರಂಗಕರ್ಮಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net