

ಔರಾದ್: ಮನರಂಜನೆ ಜತೆಗೆ ಬದುಕಿಗೆ ನೈತಿಕ ಮೌಲ್ಯಗಳ ಬೋಧನೆ ಮಾಡುವ ನಾಟಕ ಕಲೆ ಜನರನ್ನು ಸರಳವಾಗಿ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಗನ್ನಾಥ ಮೂಲಗೆ ಹೇಳಿದರು.
ಪಟ್ಟಣದ ಕನಕದಾಸ ಬಡಾವಣೆಯಲ್ಲಿ ಶ್ರೀ ಸಿದ್ಧರಾಮೇಶ್ವರ ನಾಟ್ಯ ಸಂಘ ಭಾಲ್ಕಿ ಹಾಗೂ ಸಂಭ್ರಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಬುಧವಾರ ಆಯೋಜಿಸಿದ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಯುವ ಸಮೂಹವನ್ನು ರಂಗಭೂಮಿ ಕಡೆಗೆ ಆಕರ್ಷಿಸುವಂತೆ ಮಾಡುವ ಸಂಘಟನೆಗಳು ಕಡಿಮೆಯಾಗಿವೆ. ಇದರಿಂದ ನಾಟಕ ಕಲಿಯಲು ಯುವ ಮನಸ್ಸುಗಳು ಮುಂದಾಗುತ್ತಿಲ್ಲ. ರಂಗಭೂಮಿ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ದಾಸ ಸಾಹಿತ್ಯ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಬಿ.ಎಂ. ಅಮರವಾಡಿ ಮಾತನಾಡಿದರು. ಪಟ್ಟಣ ಪಂಚಾಯತಿ ಸದಸ್ಯ ಗುಂಡಪ್ಪ ಮುದಾಳೆ, ಸಂಭ್ರಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷೆ ಅಂಜನಾಬಾಯಿ, ಸಿದ್ದರಾಮೇಶ್ವರ ನಾಟ್ಯ ಸಂಘ ನಿರ್ದೇಶಕ ಸಿದ್ದು ಕಟ್ಟಿಮನಿ, ಪ್ರಮುಖರಾದ ಮಾದಪ್ಪ ಕೋಟೆ, ಅಮೃತರಾವ ಬಿರಾದಾರ, ಅರ್ಜುನ ಭಂಗೆ, ರಾಜಕುಮಾರ ಮುದಾಳೆ, ಅಂಕುಶ ಮೇತ್ರೆ ಇತರರಿದ್ದರು.