

ಮೈಸೂರು: ಪ್ರಬಲ ಮಾಧ್ಯಮವಾಗಿರುವ ರಂಗಭೂಮಿಯ ವಸ್ತುಗಳ ಕುರಿತು ಹೊಸ ಪ್ರಯೋಗಗಳು ನಡೆಯಬೇಕಿದೆ ಎಂದು ಲೇಖಕ ನಾ.ದಿವಾಕರ ಸಲಹೆ ನೀಡಿದರು.
ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕಿರುರಂಗಮಂದಿರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ‘ದೇಸಿರಂಗ ನಾಟಕೋತ್ಸವ’ ಉದ್ಘಾಟಿಸಿ ಮಾತನಾಡಿದರು.
ಇದೀಗ ರಂಗಪ್ರಯೋಗ ಹೆಚ್ಚಾಗಿ ನಡೆಯುತ್ತಿದೆ. ಆದರೆ, ರಂಗ ವಸ್ತುಗಳು ಕುರಿತು ಪ್ರಯೋಗ ಕಡಿಮೆ. ಅಂತರ್ಜಾತಿ, ವರದಕ್ಷಿಣೆ ಪಿಡುಗಿನ ವಿಷಯವು ಈಗಾಗಲೇ ರಂಗವಸ್ತುವಾಗಿದೆ. ಆದರೆ, ಪ್ರಚಲಿತ ಸಮಸ್ಯೆಗಳು ನಾಟಕದ ರೂಪದಲ್ಲಿ ಬರಬೇಕು. ಆಧುನಿಕ ಯುಗದ ಆರ್ಥಿಕ ಪರಿಸ್ಥಿತಿ, ಡಿಜಿಟಿಲ್ ವ್ಯಸನ, ರೂಪಾಂತರಗೊಂಡಿರುವ ಮಹಿಳಾ ದೌರ್ಜನ್ಯದಂತಹ ಸಾಮಾಜಿಕ ವಿಷಯಗಳು ರಂಗವಸ್ತುವಾಗಿ ತೆರೆಮೇಲೆ ಪ್ರದರ್ಶಿಸಬೇಕಿದೆ. ಈ ನಿಟ್ಟಿನಲ್ಲಿ ಕೆಲಸವಾಗಬೇಕು ಎಂದರು.
ರಂಗಭೂಮಿ ಇನ್ನಷ್ಟು ಚಲನಶೀಲ, ಕ್ರಿಯಾಶೀಲ ಮತ್ತು ಸೃಜನಶೀಲವಾಗಿ ರಪುಗೊಳ್ಳಬೇಕಿದೆ ಎಂದರು.
ಈಗಿನ ಸಮಾಜದ ಸೂಕ್ಷ್ಮತೆಯನ್ನು ಹೇಗೆ ಹೇಳಬೇಕೆಂಬ ಗೊಂದಲ ಮೂಡಿದೆ. ಇದು ಸಾಹಿತ್ಯದ ಮೂಲಕ ಸಾಧ್ಯವಾಗುತ್ತಿಲ್ಲ. ಪುಸ್ತಕಗಳ ದರ ದುಬಾರಿಯಾಗಿದೆ. ಇವುಗಳನ್ನು ತಲುಪಿಸುವುದು ಕಷ್ಟಕರವಾಗಿದೆ. ಇದೆಲ್ಲ ಮಾರುಕಟ್ಟೆ ಆಯಾಮದೊಳಗೆ ಸಿಲುಕಿಕೊಂಡಿದೆ. ಹೀಗಾಗಿ, ಬಹಳ ಸುಲಭವಾಗಿ, ಹೆಚ್ಚು ಜನರಿಗೆ ತಲುಪಿಸಲು ಪ್ರಬಲ ಮಾಧ್ಯಮ ರಂಗಭೂಮಿ ಮಾತ್ರ ಎಂದರು.
ನಾಟಕರಂಗದಿಂದ ಅನೇಕ ಪ್ರಯೋಜನಗಳಿವೆ. ಈ ಕಲೆಯಲ್ಲಿ ಸ್ವಾಯತ್ತೆ ಇದೆ. ನಾಟಕದ ವಸ್ತುವನ್ನು ಸಮಕಾಲೀನಗೊಳಿಸಲು ಅವಕಾಶಗಳಿವೆ. ವರ್ತಮಾನವನ್ನು ಸಮರ್ಥವಾಗಿ ತೆರೆಯ ಮೇಲೆ ಪ್ರಸ್ತುತಪಡಿಸಬಹುದು. ಹೀಗಾಗಿ, ಈ ಕಲೆ ಹೆಚ್ಚು ಬಳಕೆಯಾಗಬೇಕಿದೆ ಎಂದರು,
ರಂಗಭೂಮಿ ಇನ್ನೂ ಬಹಳಷ್ಟು ದೂರ ಕ್ರಮಿಸಬೇಕು. ಅನೇಕ ಪ್ರಯತ್ನಗಳು ಆಗಬೇಕು. ಮಕ್ಕಳಿಗೆ ಈ ಕಲೆ ತಲುಪಿಸಬೇಕು. ಅವರನ್ನು ತೊಡಿಸಿಕೊಂಡು ಸಮಾಜದ ಸೂಕ್ಷ್ಮತೆ ತಿಳಿಸಿಕೊಡುವ ಕಾಯಕವೂ ಆಗಬೇಕಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ರಂಗ ನಿರ್ದೇಶಕ ಡಿ.ನಾಗೇಂದ್ರಕುಮಾರ್, ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಜನಮನ ಇದ್ದರು.
ಬಳಿಕ ಪ್ರೊ.ಲಿಂಗದೇವರು ಹಳೆಮನೆ ರಚನೆಯ ಕೃಷ್ಣ ಜನಮನ ನಿರ್ದೇಶನದ ‘ಅಕ್ಕ’ ನಾಟಕ ಪ್ರದರ್ಶನಗೊಂಡಿತು.