

ಮುದಗಲ್: ಆಧುನಿಕದ ಭರಾಟೆಯಲ್ಲಿ ರಂಗಭೂಮಿ ನಶಿಸಿ ಹೋಗುತ್ತಿದ್ದು ಕಲೆಯನ್ನು ಉಳಿಸಿ ಕಲಾವಿದರನ್ನು ಬೆಳೆಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ ಹೇಳಿದರು.
ಪಟ್ಟಣದಲ್ಲಿ ಆಶಾಪೂರದ ಶ್ರೀ ಸಂಗಮೇಶ್ವರ ನಾಟ್ಯ ಸಂಘದಿಂದ ಆಯೋಜಿಸಿದ್ದ ನಾಟಕೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಟಿವಿ, ಮೊಬೈಲ್ ಬಳಕೆಯಿಂದ ರಂಗಭೂಮಿ ಕಲೆ ಮತ್ತು ಕಲಾವಿದರು ಅವಸಾನದ ಅಂಚಿಗೆ ತಲುಪುತ್ತಿದ್ದು, ಅವರನ್ನು ಸಾರ್ವಜನಿಕರು ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದರು.
ಕಂಪನಿ ಮಾಲಕಿ ಪ್ರೇಮಾ ಗುಳೇದಗುಡ್ಡ ಮಾತನಾಡಿ, ಕಳೆದ 44 ವರ್ಷಗಳಿಂದ ಕಂಪನಿಯನ್ನು ಕಟ್ಟಿ ಬೆಳೆಸಿ ಕಲಾವಿದರನ್ನು ಪೋಷಿಸಲಾಗುತ್ತಿದೆ. ಆಧುನಿಕದ ಭರಾಟೆಯಲ್ಲಿ ರಂಗಭೂಮಿ ಕಲೆ ಮಾಸುತ್ತಿದ್ದು, ಕಲಾವಿದರನ್ನು ಕಲಾಪ್ರೇಮಿಗಳು ಪೋಷಿಸಬೇಕೆಂದು ಕೋರಿದರು. ಅಂಕಲಿಮಠದ ಬಸವರಾಜ ಸ್ವಾಮಿಗಳು ಜ್ಯೋತಿ ಬೆಳಗಿಸಿ ನಾಟಕೋತ್ಸವಕ್ಕೆ ಚಾಲನೆ ನೀಡಿದರು. ಪ್ರಮುಖರಾದ ಮಹಾಂತೇಶ ಪಾಟೀಲ್, ಮಹಾಂತೇಶ ಚೆಲುವಾದಿ ಇತರರಿದ್ದರು.