ರಂಗನಾಥಸ್ವಾಮಿಯವರ ವರ್ಷದ ಮೊದಲ ದೊಡ್ಡ ರಥೋತ್ಸವ

ರಂಗನಾಥಸ್ವಾಮಿಯವರ ವರ್ಷದ ಮೊದಲ ದೊಡ್ಡ ರಥೋತ್ಸವ
Published on

ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಗುತ್ತಿನಕೆರೆ ಶ್ರೀರಂಗನಾಥಸ್ವಾಮಿಯವರ ವರ್ಷದ ಮೊದಲ ದೊಡ್ಡ ರಥೋತ್ಸವ ಭಕ್ತರ ಜಯ ಘೋಷದೊಂದಿಗೆ ಮಂಗಳವಾರ ಮಧ್ಯಾಹ್ನ ನೆರವೇರಿತು.

ಗ್ರಾಮದ ಹೃದಯ ಭಾಗದಲ್ಲಿರುವ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.ಮೂಡಲಗಿರಿ ತಿಮ್ಮಪ್ಪಸ್ವಾಮಿ, ಯಳವಾರೆ ಹುಚ್ಚಮ್ಮದೇವಿ. ಹಾರ‌್ನಳ್ಳಿ ಕೋಡಮ್ಮದೇವಿ, ಹುಲ್ಲೇನಹಳ್ಳಿ ಚಿಕ್ಕಮ್ಮದೇವರುಗಳ ಸಮ್ಮುಖದಲ್ಲಿ ಶ್ರೀ ರಂಗನಾಥಸ್ವಾಮಿಯವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಬಳಿಕ ಬಣ್ಣ ಬಣ್ಣದ ಬಟ್ಟೆಗಳಿಂದ, ವಿಶೇಷ ಹೂಗಳಿಂದ ಶೃಂಗರಿಸಲಾಗಿದ್ದ ರಥದಲ್ಲಿ ಪ್ರತಿಷ್ಠಾಪಿಸಿ ಶಾಸ್ತ್ರೋಕ್ತ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಭಕ್ತಾರು ರಥದ ಗಾಲಿಗೆ ತೆಂಗಿನಕಾಯಿಗಳನ್ನು ಹೊಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಗೋವಿಂದನ ನಾಮ ಸ್ಮರಣೆಯೊಂದಿಗೆ ರಥದ ಹಗ್ಗವನ್ನು ಎಳೆಯುತ್ತಿದ್ದಂತೆ ಭಕ್ತರು ಕಳಸಕ್ಕೆ ಬಾಳೆಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು.ದೇವಾಲಯ ಸಮಿತಿ ವತಿಯಿಂದ ಪಾನಕ ಫಲಹಾರ ವಿತರಿಸಲಾಯಿತು.ರಥೋತ್ಸವದ ಬಳಿಕ ವಸಂತೋತ್ಸವ, ಮಣೇವು ಸೇವೆ, ಮಹಾಮಂಗಳಾರತಿ ಜರುಗಿತು. ಸಂಜೆ ಗಂಗಾಸ್ನಾನದ ನಂತರ ಶ್ರೀಯವರಿಗೆ ಉಯ್ಯಲೆ ಉತ್ಸವವನ್ನು ಏರ್ಪಡಿಸಲಾಗಿತ್ತು. ಹಾರನಹಳ್ಳಿ,ಹೆಬ್ಬಾರನಹಳ್ಳಿ, ಹಬ್ಬನಘಟ್ಟ, ಕನಕಂಚೇನಹಳ್ಳಿ, ಕೋಡಿಮಠ, ದೊಡ್ಡೇನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಸ್ಥರು ವೈಭವದ ರಥೋತ್ಸವವನ್ನು ಕಣ್ತುಂಬಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net